ಬೆಂಗಳೂರು, ಮೇ 21, ಕೋವಿಡ್-19 ಲಾಕ್ ಡೌನ್ ನಿಂದಾಗಿ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಆಟೋ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಒಂದು ಬಾರಿಗೆ ಪರಿಹಾರವಾಗಿ ರೂ.5000 ಗಳ ಸಹಾಯ ಧನ ಘೋಷಣೆ ಮಾಡಲಾಗಿದ್ದು, ಈ ಸಹಾಯ ಧನವನ್ನು ಆಟೋ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರು ಪಡೆಯುವಲ್ಲಿ ಸಾಕಷ್ಟು ಗೊಂದಲ ಮತ್ತು ಸಮಸ್ಯೆಗಳಿರುವ ಬಗ್ಗೆ ಕಾಂಗ್ರೆಸ್ ಮುಖಂಡರು ಹಾಗೂ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರ ಗಮನಕ್ಕೆ ತಂದಿದ್ದಾರೆ.
ಆಟೋ ಮತ್ತು ಕ್ಯಾಬ್ ಚಾಲಕರ ನಿಯೋಗದೊಂದಿಗೆ ವಿಕಾಸಸೌಧದಲ್ಲಿ ಸಾರಿಗೆ ಸಚಿವರನ್ನು ಭೇಟಿ ಮಾಡಿದ ದಿನೇಶ್ ಗುಂಡೂರಾವ್, ಸರ್ಕಾರದ ಸಹಾಯ ಧನ ಪಡೆಯಲು ಇರುವ ಮಾನದಂಡವನ್ನು ಸರಳೀಕರಣಗೊಳಿಸಿ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಕೂಡಲೇ ಪರಿಹಾರ ಧನ ಸಿಗುವಂತೆ ಮಾಡಬೇಕೆಂದು ಸಚಿವರನ್ನು ಒತ್ತಾಯಿಸಿದ್ದಾರೆ.
ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಚಾಲಕರಿಗೆ ಕೊರೋನಾ ಸಂದರ್ಭದಲ್ಲಿ ಪರಿಹಾರ ಘೋಷಣೆ ಮಾಡಿರುವ ಪರಿಹಾರದ ಹಣ ಚಾಲಕರಿಗೆ ಸಿಗುತ್ತಿಲ್ಲ. ಇದಕ್ಕೆಅನೇಕ ಕಠಿಣ ನಿಬಂಧನೆಗಳನ್ನು ಹಾಕಲಾಗಿದೆ. ಈ ರೀತಿ ಮಾಡುವುದರಿಂದ ಪ್ರಯೋಜನ ಇಲ್ಲ. ಅದರ ಬದಲಿಗೆ ಈ ಪರಿಹಾರದ ಯೋಜನೆಯನ್ನೇ ಹಿಂಪಡೆಯುವುದು ಒಳಿತು ಎಂದರು. ಚಾಲಕರಿಗೆ ಸೂಕ್ತ ಸಮಯದಲ್ಲಿ ಪರಿಹಾರ ನೀಡುವಂತೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಸಚಿವರು ಸಹ ಸರಿಯಾದ ರೀತಿಯಲ್ಲಿ ಸ್ಪಂದಿಸಿ, ಇನ್ನೆರಡು ದಿನಗಳಲ್ಲಿ ಎಲ್ಲ ಸರಿಪಡಿಸುವುದಾಗಿ ಹೇಳಿದ್ದಾರೆ. ಹಾಗಾಗಿ ತಾವೂ ಕೂಡ ಎರಡು ದಿನ ಕಾದು ನೋಡಿ ಬಳಿಕ ಮುಂದೇನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.