ದತ್ತನ ಸನ್ನಿಧಿಯಲ್ಲಿ ಡಿಕೆಶಿ

ಕಲಬುರಗಿ, ಜ 30,ನಿನ್ನೆಯಷ್ಟೇ  ಯಾದಗಿರಿ ಜಿಲ್ಲೆಯ  ಗೋನಾಲ ಗಡಿ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ದೇವಾಲಯ ಭೇಟಿ ಇಂದು ಕೂಡ  ಮುಂದುವರೆದಿದೆ.ಗುರುವಾರದಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣಗಾಪುರಲ್ಲಿನ ದತ್ತಾತ್ರೇಯ ದೇಗುಲಕ್ಕೆ ಭೇಟಿ ನೀಡಿ, ದತ್ತನ ಪಾದುಕೆ ದರ್ಶನ ಪಡೆದಿದ್ದಾರೆ.

ದತ್ತನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರ ದರ್ಶನಕ್ಕೆ ಬಂದಿದ್ದೆನೆ.ಹೀಗಾಗಿ ಇಲ್ಲಿ ರಾಜಕೀಯ ವಿಚಾರದ ಬಗ್ಗೆ ಮಾತನಾಡುವುದಿಲ್ಲ ಎಂದರು. ನಾಡಿನ ಸಮೃದ್ಧಿಗಾಗಿ,  ಜನರ ಒಳಿತಿಗಾಗಿ ದತ್ತನ ನಿರ್ಗುಣ ಪಾದುಕೆಗಳಿಗೆ ಪೂಜೆ ಸಲ್ಲಿಸಿದ್ದೆನೆ.  ಈ ಹಿಂದೆ ಹಲವು ಬಾರಿ ದತ್ರಾತ್ರೇಯನ ದರ್ಶನ ಪಡೆದಿದ್ದೇನೆ. ಮತ್ತೆ ಗಾಣಗಾಪುರಕ್ಕೆ ಬರುತ್ತೇನೆ ಎಂದು ಹೇಳಿದ್ದೆ. ಹೀಗಾಗಿ ಇಂದು ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ  ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಅಫಜಲಪುರ ಶಾಸಕ ಎಂ.ವೈ ಪಾಟೀಲ್, ಎಮ್‌ಎಲ್‌ಸಿ ತಿಪ್ಪಣಪ್ಪ ಕಮಕನೂರು ಇದ್ದರು. ಈ ಹಿಂದೆ ಅಕ್ರಮ ಹಣ ಪ್ರಕರಣದಲ್ಲಿ ತಿಹಾರ್​ ಜೈಲಿನಲ್ಲಿ ಸೆರೆವಾಸ ಅನುಭವಿಸಿ ಹೊರ ಬಂದ ನಂತರವೂ ಡಿ.ಕೆ. ಶಿವಕುಮಾರ್​ ಅವರು ದತ್ತಾತ್ರೇಯನ ದರ್ಶನ ಪಡೆದಿದ್ದರು. ಈಗ ಮತ್ತೊಮ್ಮೆ ಹರಕೆ ತೀರಿಸಲು ಕುಟುಂಬ ಸಮೇತರಾಗಿ ಅವರು ದತ್ತಾತ್ರೇಯ ದೇಗುಲಕ್ಕೆ ಭೇಟಿ ನೀಡಿದ್ದಾರೆ.