ನವದೆಹಲಿ, ಜು ೨೬- ಅನುಭವಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಹಾಗೂ ಸೇನೆಯ ಪ್ಯಾರಚೂಟ್ ರೆಜಿಮೆಂಟ್ ವಿಭಾಗದ ಗೌರವ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ಸಿಂಗ್ ಧೋನಿ ಅವರು ಜುಲೈ 31 ರಿಂದ ಕಾಶ್ಮೀರದಲ್ಲಿ ಸೇನಾ ತರಬೇತಿ ಪಡೆಯಲಿದ್ದಾರೆ.
ಸೇನೆಯು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಂತೆ, ಧೋನಿ ಜುಲೈ 31 ರಿಂದ ಕಾಶ್ಮೀರದಲ್ಲಿ ಬೆಟಾಲಿಯನ್ ಗಳಲ್ಲಿ ತರಬೇತಿ ನಡೆಸಲಿದ್ದಾರೆ. ಜುಲೈ 31 ರಿಂದ ಆಗಸ್ಟ್ 15 ರವರೆಗೆ ಕಾಶ್ಮೀರ ಕಣಿವೆಯಲ್ಲಿ ಬೆಟಾಲಿಯನ್ನ ವಿಕ್ಟರ್ ಫೋರ್ಸ್ನೊಂದಿಗೆ ಧೋನಿ ತರಬೇತಿ ನಡೆಸಲಿದ್ದಾರೆ .
ತಮಗೆ ಸೇನಾ ತರಬೇತಿ ನೀಡುವಂತೆ ಧೋನಿ ಅವರು ಮನವಿ ಮಾಡಿದ್ದರು, ಇದನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅನುಮೋದಿಸಿದ್ದಾರೆ. ಭಾರತದ ಮಾಜಿ ನಾಯಕ ಧೋನಿಗೆ ಈ ಅವಧಿಯಲ್ಲಿ ಗಸ್ತು, ಕಾವಲು ಮತ್ತು ಪೋಸ್ಟ್ ಡ್ಯೂಟಿ ನೀಡಲಾಗಿದೆ ಮತ್ತು ಈ ಅವಧಿಯಲ್ಲಿ ಅವರು ಸೈನಿಕರೊಂದಿಗೆ ಇರುತ್ತಾರೆ.
ಸೇನೆಯೊಂದಿಗೆ ತರಬೇತಿ ಪಡೆಯಲು, ಭಾರತೀಯ ಕ್ರಿಕೆಟ್ ಮಂಡಳಿಯಿಂದ (ಬಿಸಿಸಿಐ) ಎರಡು ತಿಂಗಳ ವಿರಾಮ ಪಡೆದುಕೊಂಡಿದ್ದಾರೆ. ಮುಂದಿನ ತಿಂಗಳು ಪ್ರಾರಂಭವಾಗುವ ವೆಸ್ಟ್ ಇಂಡೀಸ್ ಪ್ರವಾಸದಿಂದ ಅವರು ಹಿಂದೆಸರಿದಿದ್ದಾರೆ.
ಮಿಲಿಟರಿಯ ಅಧಿಕೃತ ಮೂಲಗಳ ಪ್ರಕಾರ, ಧೋನಿ ಇತರ ಸೈನಿಕರೊಂದಿಗೆ ತರಬೇತಿ ಪಡೆಯಲಿದ್ದಾರೆ. ಧೋನಿಯ ಬೆಟಾಲಿಯನ್ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ.
ಮಾಜಿ ನಾಯಕನಿಗೆ 2011 ರಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯನ್ನು ನೀಡಿ ಗೌರವಿಸಲಾಗಿತ್ತು.