ಧಾರವಾಡ : ಕನ್ನಡ ಭಾಷಾಶಾಸ್ತ್ರವನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಡಾ. ರಾ.ಯ. ಧಾರವಾಡಕರ ಅವರದು. ಲಲಿತ ಪ್ರಬಂಧಕಾರರಾಗಿ, ಧಾರವಾಡಕರ ಅವರು ಅನುಕರಣೀಯ ಸಾಹಿತ್ಯ ಹೊರತಂದಿದ್ದಾರೆ. ಅವರು ಹಚ್ಚಿದ ಕನ್ನಡದ ದೀಪ ಜಾಜ್ವಲಮಾನವಾಗಿ ಬೆಳಗುವಂತಾಗಿದೆ. ಅವರ ಸಮಗ್ರ ಕೃತಿಗಳ ಸಂಪುಟವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರತರುವುದು ಅತ್ಯವಶ್ಯ ಎಂದು ಹಿರಿಯ ಸಾಹಿತಿ ಡಾ. ಜಿ. ಎಂ. ಹೆಗಡೆ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ರಾ. ಯ. ಧಾರವಾಡಕರ ದತ್ತಿ ಮತ್ತು ಅವರ ಜನ್ಮಶತಮಾನೋತ್ಸವ ಉದ್ಘಾಟನಾ ಸಮಾರಂಭ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಅವರು ಮಾತನಾಡುತ್ತಿದ್ದರು.
ಹೆಗಡೆಯವರು, ಕನ್ನಡಕ್ಕೆ ಕನ್ನಡ ನಾಡಿನಲ್ಲಿಯೇ ದುಸ್ಥಿತಿ ಬಂದೊದಗುತ್ತಿರುವುದು ವಿಷಾದನೀಯ ಸಂಗತಿ. ಇನ್ನಾದರೂ ಸರಕಾರ, ಕನ್ನಡದ ಮಣ್ಣಿಗೆ ಅನ್ಯಾಯ ಮಾಡದೇ ಕನ್ನಡವನ್ನು ಎಲ್ಲ ಹಂತಗಳಲ್ಲೂ ಉಳಿಸಿ, ಬೆಳೆಸುವ ಕಾರ್ಯ ಮಾಡಬೇಕೆಂದರು. ಸ್ವಾತಂತ್ರ ಹೋರಾಟ, ನಾಡಿನ ಏಕೀಕರಣವನ್ನು ಹತ್ತಿರದಿಂದ ಕಂಡ ಧಾರವಾಡಕರ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಿದ್ಧಹಸ್ತರು. ಅವರ ಕನ್ನಡ ಕಾನೂನು ಸಾಹಿತ್ಯ, ಪ್ರವಾಸ ಸಾಹಿತ್ಯ ಶ್ರೇಷ್ಠ ದರ್ಜೆಯದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ನೇತ್ರತಜ್ಞ ಪದ್ಮಶ್ರೀ ಡಾ. ಎಂ. ಎಂ. ಜೋಶಿಯವರು ಧಾರವಾಡಕರ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ.ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಮಾತನಾಡಿ, ಸಭಿಕರನ್ನು ಚಮತ್ಕಾರಿಕ ರೀತಿಯಲ್ಲಿ ಸಮ್ಮೋಹನಗೊಳಿಸುವ ಭಾಷಣ ಕಲೆ ಧಾರವಾಡಕರ ಅವರಿಗೆ ಸಿದ್ಧಿಸಿತ್ತು. ಧಾರವಾಡಕರ ಮಾತನಾಡುವವರಿಗೆ ಮಾದರಿಯೆಂಬಂತೆ ಅವರು ವಿಷಯ ಸಂಗ್ರಹಿಸಿ, ಪರಿಣಾಮಕಾರಿಯಾಗಿ ಭಾಷಣ ಪ್ರಸ್ತುತಪಡಿಸುತ್ತಿದ್ದರು.
ಸಾನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಇಂಥ ಕಾರ್ಯಕ್ರಮಗಳು ಭವಿಷ್ಯದ ಜನಾಂಗವನ್ನು ರೂಪಿಸಲು ಸಹಕಾರಿಯಾಗುತ್ತವೆ. ಧಾರವಾಡಕರ ಮುಂತಾದ ಮಹನೀಯರ ಆದರ್ಶಗಳು ನಮಗೆ ಮಾರ್ಗದರ್ಶಿಯಾಗಿವೆ. ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲೆಂದು ಹಾರೈಸಿದರು.
ವೇದಿಕೆ ಮೇಲೆ ದತ್ತಿ ದಾನಿಗಳ ಪರವಾಗಿ ಅನಿಲ ಧಾರವಾಡಕರ ಉಪಸ್ಥಿತರಿದ್ದರು. ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿದರು. ಉಪಾಧ್ಯಕ್ಷ ನಿಂಗಣ್ಣ ಕುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಮನೋಜ ಪಾಟೀಲ ವಂದಿಸಿದರು. ವೈಷ್ಣವಿ ಅಗ್ನಿಹೋತ್ರಿ ಪ್ರಾರ್ಥಿಸಿದರು. ಬಸವಪ್ರಭು ಹೊಸಕೇರಿ ನಿರೂಪಿಸಿದರು.
ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ, ಸಾಹಿತಿಗಳಾದ ಶ್ರೀನಿವಾಸ ವಾಡಪ್ಪಿ, ಹರ್ಷ ಡಂಬಳ, ಹೆಚ್. ವಿ. ಕಾಖಂಡಕಿ, ರಾಮಕೃಷ್ಣ ಸುಂಕದ, ಪ್ರಾಚಾರ್ಯ ಡಾ. ಎಸ್. ಎನ್. ಭಟ್, ಡಾ. ಎಸ್. ಎನ್. ಅಷ್ಟಪುತ್ರೆ, ಡಾ. ಪಿ. ಆರ್. ಹಂಚಿನಮನಿ, ಡಾ. ಆರ್. ಕೆ. ಮುಳಗುಂದ, ಡಾ. ವಿ. ಕೆ. ದೇಶಪಾಂಡೆ, ಡಾ. ಎಚ್. ಎ. ಕಟ್ಟಿ, ಎಲ್.ಇ.ಎ. ಸಂಸ್ಥೆಯ ಎಂ. ಯು. ಪಾಟೀಲ, ಗ್ರಂಥಪಾಲ ಡಾ. ಎಸ್. ಬಿ. ಪಾಟೀಲ, ಎಸ್. ಸಿ. ಪಾಟೀಲ, ಎಸ್. ಜಿ. ತಿಗಡಿ, ಮಲ್ಲಿಕಾರ್ಜುನ ಚಿಕ್ಕಮಠ, ಕೆ. ಎಸ್. ಭೀಮಣ್ಣವರ ಅಲ್ಲದೇ ಸಂಘದ ಪದಾಧಿಕಾರಿಗಳಾದ ಶಿವಣ್ಣ ಬೆಲ್ಲದ, ಪ್ರಕಾಶ ಎಸ್. ಉಡಿಕೇರಿ, ಸದಾನಂದ ಶಿವಳ್ಳಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ಮನೋಜ ಪಾಟೀಲ, ಸೇತುರಾಮ ಹುನಗುಂದ, ಇಸಬೆಲ್ಲಾ ಝೇವಿಯರ್, ದತ್ತ ನೀರಲಗಿ, ಎಸ್. ಬಿ. ಗುತ್ತಲ, ಮಹೇಶ ಕುಲಕರ್ಣಿ, ಚಂದ್ರಶೇಖರ ಅಮಿನಗಡ ಮುಂತಾದವರು ಭಾಗವಹಿಸಿದ್ದರು.