ಧಾರವಾಡ 21: ಜಿಲ್ಲೆಯ ಸಾಹಿತ್ಯ, ಸಂಗೀತದ ಬೆಳವಣಿಗೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಪ್ರಸಿದ್ಧ ಸಂಗೀತಗಾರರ, ಸಾಹಿತಿಗಳ, ಕಲಾವಿದರ ಹೆಸರಿನಲ್ಲಿ ರಚನೆಯಾಗಿರುವ ಟ್ರಸ್ಟ್ಗಳನ್ನು ವಿವಿಧ ಕಾರ್ಯಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಕ್ರೀಯಾಶೀಲಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಸ್ವರಸಾಮ್ರಾಟ, ಪದ್ಮಭೂಷಣ ಡಾ. ಬಸವರಾಜ ರಾಜಗುರು ಅವರ 29 ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮ ಇಂದು ಬೆಳಿಗ್ಗೆ ಹೊಸಯಲ್ಲಾಪುರದ ಜಗದ್ಗುರು ಮಳೆಮಲ್ಲೇಶ್ವರ ಮಹಾಸಂಸ್ಥಾನ ಹಿರೇಮಠದ ಆವರಣದಲ್ಲಿ ಜರುಗಿದ ಅವರ ಸಮಾಧಿ ಬಳಿ ಬಸವರಾಜ ರಾಜಗುರು ಟ್ರಸ್ಟ್ ಅಧ್ಯಕ್ಷರು ಆಗಿರುವ ಅವರು ಸಮಾಧಿಗೆ ಪೂಜೆ, ಪುಷ್ಪಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ, ಸಾಹಿತ್ಯ, ಸಂಗೀತ ಮತ್ತು ಚಿತ್ರಕಲೆಗಳನ್ನು ಪ್ರೋತ್ಸಾಹಿಸುವ ಮೂಲಕ ಧಾರವಾಡ ಜಿಲ್ಲೆಯ ಗತವೈಭವ ಮರುಕಳಿಸುವಂತೆ ಮಾಡಲು ಕನ್ನಡ ಮತ್ತು ಸಂಸ್ಕೃಇ ಇಲಾಖೆ ಹಾಗೂ ಸಂಘ,ಸಂಸ್ಥೆಗಳೊಂದಿಗೆ ಚರ್ಚಿಸಿ, ಕ್ರಿಯಾಯೋಜನೆ ರೂಪಿಸಲಾಗುವುದು. ಪ್ರತಿಭಾವಂತ ಕಲಾವಿದರಿಗೆ ಪ್ರೊತ್ಸಾಹ ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾದೀಕಾರಿಗಳು ಹೇಳಿದರು.
ಜಗದ್ಗುರು ಮಳೆಮಲ್ಲೇಶ್ವರ ಮಹಾಸಂಸ್ಥಾನ ಹಿರೇಮಠದ ಹಿರಿಯ ಜಗದ್ಗುರು ಷ.ಬ್ರ. ಪಟ್ಟಗದಗಯ್ಯಸಾಮಿ ಗುರುಮಳೇಶ್ವರ ಸ್ವಾಮಿಗಳು ಸಾನಿಧ್ಯವಹಿಸಿ, ಆಶರ್ವಚನ ನೀಡಿದರು. ಪೂಜ್ಯ ಶಶಾಂಕ ದೇವರು ಉಪಸ್ಥಿತರಿದ್ದರು.
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಂಡಿತ. ಬಸವರಾಜ ಗುರು ಶಿಷ್ಯರು ಹಾಗೂ ಪ್ರಸಿದ್ದ ಸಂಗೀತ ಕಲಾವಿದರಾದ ಮುದ್ದು ಮೋಹನ, ಸಂಗೀತಾ ಕಟ್ಟಿ, ರಾಜಗುರು ಅವರ ಮೊಮ್ಮಗ ವಿಶ್ವರಾಜ, ಮರಿಮೊಮ್ಮಗ ಅಥರ್ವ ಸೇರಿದಂತೆ ವಿವಿಧ ಸಂಗೀತಕಲಾವಿದರು ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ಸದಸ್ಯರಾದ ಶ್ರೀಮತಿ ಭಾರತಿದೇವಿ ರಾಜಗುರು, ಮುದ್ದು ಮೋಹನ, ಸಂಗೀತಾ ಕಟ್ಟಿ, ನಿಜಗಿಣಿ ರಾಜಗುರು, ಡಾ.ಜಿ.ಎಮ್.ಹೆಗಡೆ, ಉದಯ ದೇಸಾಯಿ ಸೇರಿದಂತೆ ಸಂಗಿತಾಸಕ್ತರು, ರಾಜಗುರು ಶಿಷ್ಯಂದಿರು, ಅಭಿಮಾನಿಗಳು ಭಾಗವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮಳೆಮಲ್ಲೇಶ್ವರ ಮಹಾಸಂಸ್ಥಾನ ಹಿರೇಮಠಕ್ಕೆ ಭೇಟಿ ನೀಡಿ, ಹಿರಿಯ ಜಗದ್ಗುರು ಷ.ಬ್ರ. ಪಟ್ಟಗದಗಯ್ಯ ಗುರುಮಳೇಶ್ವರ ಸ್ವಾಮಿಗಳಿಂದ ಮಠದ ಐತಿಹಾಸಿಕತೆ ಕುರಿತು ಮಾಹಿತಿ ಪಡೆದರು.