ಧಾರವಾಡಕ್ಕೆ ಹಿಡಕಲ್ ನೀರಿನ ಕಾಮಗಾರಿ ತಡೆಯದಿದ್ದರೆ 7ರಂದು ಧರಣಿ

Dharna on 7th if Hidal water works for Dharwad is not stopped

 ಧಾರವಾಡಕ್ಕೆ ಹಿಡಕಲ್ ನೀರಿನ ಕಾಮಗಾರಿ ತಡೆಯದಿದ್ದರೆ 7ರಂದು ಧರಣಿ 

ಬೆಳಗಾವಿ 18: ಜಿಲ್ಲೆಯ ಹಿಡಕಲ್ ಜಲಾಶಯದದಿಂದ ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಪೈಪ್‌ಲೈನ್ ಕಾಮಗಾರಿಯಿಂದ ಬೆಳಗಾವಿ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭಯ ಇದ್ದು, ಈ ಕೂಡಲೇ ಕಾಮಗಾರಿ ತಡೆಯದಿದ್ದರೆ ಮಾ. 7ರಂದು ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದು ಮಾಜಿ ಸಚಿವ ಶಶಿಕಾಂತ ನಾಯಕ ಹೇಳಿದರು. 

ನಗರದಲ್ಲಿ ಮಂಗಳವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಡಕಲ್ ಜಲಾಶಯದಿಂದ ಬಾಗಲಕೋಟ, ಬೆಳಗಾವಿ ನಗರ, ಚಿಕ್ಕೋಡಿಗಳಲ್ಲಿ ನೀರು ಸರಬರಾಜು ಆಗುತ್ತದೆ. ಹುಬ್ಬಳ್ಳಿ-ಧಾರವಾಡಕ್ಕೆ ನವಿಲುತೀರ್ಥ ಜಲಾಶಯದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಹಿಡಕಲ್ ಜಲಾಶಯದಿಂದ ನೀರು ಪೂರೈಕೆ ಮಾಡುವಾಗ ಬೆಳಗಾವಿ ಜಿಲ್ಲಾಡಳಿತ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದರು.  

ಹಿಡಕಲ್ ಜಲಾಶಯದ ನೀರು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯಲು ಪೈಪ್‌ಲೈನ್ ಕಾಮಗಾರಿ ನಿಲ್ಲಿಸಬೇಕು. ಈ ಕುರಿತು ಮಾ. 5ರ ವರೆಗೆ ಜಿಲ್ಲಾಡಳಿತಕ್ಕೆ ಸಮಯ ನೀಡಲಾಗಿದೆ. ಜಿಲ್ಲಾಡಳಿತವೂ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ ಎಂದರು. ಇದೇ ವೇಳೆ ರಾಜಕುಮಾರ ಟೋಪಣ್ಣವರ ಅವರು ಮಾತನಾಡಿ, ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡುತ್ತಿರುವುದು ಹಿಡಕಲ್ ಜಲಾಶಯದ ಉಳಿವಿಗಾಗಿ ಮಾತ್ರ ಅಲ್ಲ ಜೊತೆಗೆ ಬೆಳಗಾವಿ ಜಿಲ್ಲೆಗೆ ನಿರಂತರವಾಗಿ ಹುಬ್ಬಳ್ಳಿ-ಧಾರವಾಡದಿಂದ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಬೆಳಗಾವಿ ನಗರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗೆ ನೀರು ಸರಬರಾಜು ಮಾಡುವವರು ಬೆಳಗಾವಿ ಪಾಲಿಕೆಯವರು. ಆದರೆ ಪಾಲಿಕೆಯ ಮೇಯರ್, ಉಪಮೇಯರ್ ವಿಶೇಷ ಸಭೆ ಕರೆದು ಹಿಡಕಲ್ ಜಲಾಶಯದ ನೀರು ಧಾರವಾಡಕ್ಕೆ ತೆಗೆದುಕೊಂಡು ಹೋಗುತ್ತಿರುವ ನೀರಿನ ಬಗ್ಗೆ ವಿರೋಧ ವ್ಯಕ್ತಿ ಪಡಿಸಿ ಠರಾವ್ ಪಾಸ್ ಮಾಡಬೇಕು ಎಂದು ಆಗ್ರಹಿಸಿದರು. ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿಯ ಸಲುವಾಗಿ ನಮ್ಮ ಬೆಳಗಾವಿ ಜಿಲ್ಲೆಗೆ ನಿರಂತರವಾಗಿ ಅನ್ಯಾಯವಾಗುತ್ತ ಬಂದಿದೆ. ಕೈಗಾರಿಕೆ ಉದ್ಯಮಗಳು ಬೆಳಗಾವಿಗೆ ಬರಬೇಕಾಗಿದ್ದು ಹುಬ್ಬಳ್ಳಿ ಧಾರವಾಡದ ಪಾಲಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

ಬೆಳಗಾವಿಯ ಬಹಳಷ್ಟು ಜನ ಉದ್ಯಮಿಗಳಿಗೆ ಹಾಗೂ ನವೋದ್ಯಮಕ್ಕೆ, ಐಐಟಿ, ಸ್ಟಾರ್ಟ್‌ ಯೋಜನೆ, ಆರ್ಟಿಫಿಷಿಯಲ್ ಇಂಟಲಿಯಜಂಟನ್, ಎಕ್ಸಿಲಿಯಂಟ್ ಸೇಂಟರ್ ಹುಬ್ಬಳ್ಳಿ-ಧಾರವಾಡಕ್ಕೆ ಹೋದವು. ಕರ್ನಾಟಕದಲ್ಲಿ ಬೆಳಗಾವಿ ಜನರು ಯಾವ ತಪ್ಪು ಮಾಡಿದ್ದಾರೆ. ಪ್ರತಿಯೊಂದು ವಿಷಯಕ್ಕೆ ನಾವು ಹುಬ್ಬಳ್ಳಿ-ಧಾರವಾಡಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ, ಸಿದಗೌಡ ಮೋದಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.