ಧರ್ಮಸ್ಥಳ ಕೊಲೆ, ಅತ್ಯಾಚಾರದ ಪ್ರಕರಣ: ನಿಸ್ಪಕ್ಷಪಾತ ತನಿಖೆಗೆ ಆಗ್ರಹ

ಧರ್ಮಸ್ಥಳ ಕೊಲೆ, ಅತ್ಯಾಚಾರದ ಪ್ರಕರಣ: ನಿಸ್ಪಕ್ಷಪಾತ ತನಿಖೆಗೆ ಆಗ್ರಹ Dharmasthala murder and rape case: Demand for impartial investigation

ವಿಜಯಪುರ 23 : ಧರ್ಮಸ್ಥಳ ವ್ಯಾಪ್ತಿಯಲ್ಲಿ ಜರುಗಿದೆ ಎನ್ನಲಾದ ಮಹಿಳೆಯರ ಕೊಲೆ, ಅತ್ಯಾಚಾರದ ಆಘಾತಕಾರಿ ಪ್ರಕರಣಗಳ ಕುರಿತು ನಿಸ್ಪಕ್ಷಪಾತ ತನಿಖೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಕೋರಿ ಇಂದು ಎಐಎಮ್‌ಎಸ್‌ಎಸ್ ವಿಜಯಪುರ ಜಿಲ್ಲಾ ಸಮಿತಿಯಿಂದ ನಿಯೋಗದಲ್ಲಿ ತೆರಳಿ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. 

ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನಡೆದಿವೆ ಎನ್ನಲಾದ ಅನೇಕಾನೇಕ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ನಾಪತ್ತೆ ಹಾಗೂ ಅಸಹಜ ಸಾವು, ಘೋರ ಕೊಲೆ, ಅತ್ಯಾಚಾರ, ದೌರ್ಜನ್ಯಗಳ ಪ್ರಕರಣಗಳು ಇಡೀ ದೇಶದ ಆತ್ಮಸಾಕ್ಷಿಯನ್ನು ಕಲುಕಿ ಜನತೆಯಲ್ಲಿ ತೀವ್ರ ಆತಂಕವನ್ನು ಹುಟ್ಟಿಸಿವೆ. ಅತ್ಯಾಚಾರಕ್ಕೊಳಗಾದ ನೂರಕ್ಕೂ ಹೆಚ್ಚು ಶಾಲಾ ಬಾಲಕಿಯರ, ಮಹಿಳೆಯರ ಶವಗಳನ್ನು 1995ರಿಂದ 2014ರ ನಡುವೆ ಅಲ್ಲಿ ಸುತ್ತಮುತ್ತ ಹೂತಿದ್ದೇನೆ ಎಂದು ಹೇಳಿರುವ ಧರ್ಮಸ್ಥಳದ ಮಾಜಿ ಪೌರಕಾರ್ಮಿಕ ಎನ್ನಲಾದ ವ್ಯಕ್ತಿಯ ದೂರನ್ನು ಆಧರಿಸಿ ಎಫ್‌.ಐ.ಆರ್‌. ಮಾಡಲಾಗಿದೆ.  

ಅವರು ಹೂತಿರುವ ಬಹುಪಾಲು ಶವಗಳು ಬಾಲಕಿಯರು ಮತ್ತು ಮಹಿಳೆಯರದ್ದು ಎಂಬುದು ಬಹಳ ಅಘಾತಕಾರಿ ವಿಷಯವಾಗಿದೆ. 2010ರಲ್ಲಿ ಆತ ಶಾಲಾ ಬ್ಯಾಗ್ ಸಮೇತ ಹೂತಿದ್ದ ಸುಮಾರು 12ವರ್ಷದ ಬಾಲಕಿಯ ಶವದ ನೆನಪು ಆತನಿಗೆ ನಿದ್ರಿಸಲು ಕೊಡದೆ ಈ ಎಲ್ಲಾ ವಿಷಯಗಳನ್ನು ಬಹಿರಂಗ ಪಡಿಸಲು ಪ್ರೇರೇಪಿಸಿರುವುದಾಗಿ ಆತ ಹೇಳಿಕೊಂಡಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅಲ್ಲದೆ ಈ ವಿಷಯಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಪಡುತ್ತಿವೆ. ಅಷ್ಟೇ ಅಲ್ಲದೆ, ಈ ಪ್ರಕರಣಗಳ ವಿರುದ್ಧ ಹಲವಾರು ವರ್ಷಗಳಿಂದ ಪ್ರತಿರೋಧಗಳು, ಹೋರಾಟಗಳು ನಡೆಯುತ್ತಲೇ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ  ಇತ್ತೀಚೆಗಷ್ಟೆ ಈ ನೂರಾರು ಶವಗಳ ಸಮಾಧಿ ಪ್ರಕರಣಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು (ಎಸ್‌.ಐ.ಟಿ.) ವಿಶೇಷ ತನಿಖಾ ದಳವನ್ನು ನೇಮಿಸಿದೆ.  

ತನ್ನ ಪಶ್ಚಾತ್ತಾಪದ ನೋವಿನಿಂದ ಹೊರಬರಲು ಮತ್ತು ಬಲಿಯಾದವರ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸುಮಾರು ಒಂದು ದಶಕದ ನಂತರ ತಾನು ಮುಂದೆ ಬಂದಿದ್ದೇನೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ಅವರು ದೂರಿನಲ್ಲಿ, ಆತನನ್ನು ಮೇಲ್ವಿಚಾರಕರು ಶವಗಳು ಪತ್ತೆಯಾದ ನಿರ್ದಿಷ್ಟ ಸ್ಥಳಗಳಿಗೆ ಕರೆದು ವಿಲೇವಾರಿ ಮಾಡಲು ಹೇಳುತ್ತಿದ್ದರು. ಅವುಗಳಲ್ಲಿ ಹಲವು ಅಪ್ರಾಪ್ತ ಬಾಲಕಿಯರದ್ದಾಗಿದ್ದವು ಎಂದಿದ್ದಾರೆ. ಒಬ್ಬ 20 ವರ್ಷದ ಮಹಿಳೆಯ ಮುಖವನ್ನು ಆಸಿಡ್‌ನಿಂದ ಸುಟ್ಟು, ಅವಳ ದೇಹವನ್ನು ಪತ್ರಿಕೆಯಿಂದ ಸುತ್ತಿಡಲಾಯಿತು ಮತ್ತು ಅವಳ ದೇಹವನ್ನು ಸುಡಲು ನನ್ನನ್ನು ಕೇಳಲಾಯಿತು. ಆತನನ್ನು ಶಾಶ್ವತವಾಗಿ ಕಾಡಿದ್ದ  ಒಂದು ಘಟನೆ 2010ರಲ್ಲಿ ಕಲ್ಲೇರಿಯಲ್ಲಿ ಪೆಟ್ರೋಲ್ ಬಂಕ್‌ನಿಂದ ಸುಮಾರು 500 ಮೀಟರ್ ದೂರದಲ್ಲಿ ಶಾಲಾ ಸಮವಸ್ತ್ರ ಧರಿಸಿದ್ದ 12 ರಿಂದ 15 ವರ್ಷದೊಳಗಿನ ಹುಡುಗಿಯೊಬ್ಬಳು ಶವವಾಗಿ ಬಿದ್ದಿರುವುದು ಕಂಡುಬಂದಿದೆ, ಅದನ್ನು ಹೂಳಬೇಕೆಂದು ಹೇಳಿದ್ದು. ಸುಮಾರು ಪ್ರಕರಣಗಳಲ್ಲಿ ಮುಖ ಸುಟ್ಟು, ಬಟ್ಟೆಗಳನ್ನು ಸುಟ್ಟು ಸಾಕ್ಷ್ಯ ನಾಶಮಾಡುವ ಹುನ್ನಾರಗಳು ನಡೆದಿವೆ.  

"ಆ ಹತ್ಯೆಗಳ ಹಿಂದಿನ ಬಲಿಪಶುಗಳು ಮತ್ತು ಅಪರಾಧಿಗಳನ್ನು ಬಹಿರಂಗಪಡಿಸುವುದು ನನ್ನ ಉದ್ದೇಶ" ಎಂದು ಅತ ವಿವರಿಸಿದ್ದಾರೆ. 

ಹಾಗಾಗಿ ಈ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಶೀಘ್ರವಾಗಿ ಈ ನೂರಾರು ಸಾವುಗಳ ಕುರಿತು ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಯಾರೇ ತಪ್ಪಿತಸ್ಥರು, ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಎಷ್ಟೇ ಪ್ರಭಾವಿ ವಲಯದವರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಹಾಗೂ ಎಲ್ಲಾ ಸಾಕ್ಷಿಗಳಿಗೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ರಕ್ಷಣೆ ನೀಡಬೇಕು. ಆತಂಕ, ನೋವು, ಆಕ್ರೋಶದಲ್ಲಿರುವ ಜನತೆಗೆ ಭರವಸೆ ನೀಡಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವಿಜಯಪುರ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ. 

ನಿಯೋಗದಲ್ಲಿ ಎಐಎಮ್ ಎಸ್ ಎಸ್ ಜಿಲ್ಲಾಧ್ಯಕ್ಷರಾದ ಗೀತಾ ಹೆಚ್, ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ, ಜಂಟಿ ಕಾರ್ಯದರ್ಶಿ ಶಿವರಂಜನಿ, ಜಿಲ್ಲಾ ಸಮಿತಿ ಸದಸ್ಯರಾದ ಜಬೀನಾ ಇದ್ದರು.