ಬೆಂಗಳೂರು, ಫೆ 6 : ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರಿಗೆ ಗೌರವ ತರುವ ರೀತಿಯಲ್ಲಿ ಅವರ ಹೆಸರಿರುವ ತಾಂತ್ರಿಕ ವಿಶ್ವವಿದ್ಯಾಲಯವನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ವಿಶ್ವೇಶ್ವರಯ್ಯ ಎಂಜನಿಯರಿಂಗ್ ಕಾಲೇಜಿಗೆ (ಯುವಿಸಿಇ) ಭೇಟಿ ನೀಡಿ ನೂತನ ಕಟ್ಟಡ ಪರಿಶೀಲಿಸಿ ಮಾತನಾಡಿದ ಅವರು, ನಾಡಿಗೆ ಶ್ರೇಷ್ಠ ಎಂಜನಿಯರ್‌ಗಳನ್ನು ಕೊಟ್ಟಿರುವ, 107 ವರ್ಷಗಳ ಇತಿಹಾಸ ಹೊಂದಿರುವ ಯುವಿಸಿಇಯ ಪುನಾರಚನೆಗೆ ಸರ್ಕಾರ 25 ಕೋಟಿ ರೂ. ಮಂಜೂರು ಮಾಡಿದ್ದು, ಈಗಾಗಲೇ 15 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ 10 ಕೋಟಿ ರೂ.ಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು. ಇದಲ್ಲದೇ, ಏರೋನಾಟಿಕಲ್ ಹಾಗೂ ಸ್ಪೇಸ್ ಎಂಜಿನಿಯರಿಂಗ್ ಕಾರ್ಯಕ್ರಮಗಳನ್ನು ಆರಂಭಿಸಲು ಸಂಸ್ಥೆ ಉದ್ದೇಶಿಸಿದೆ ಎಂದು ಹೇಳಿದರು.
ವಿಶ್ವೇಶ್ವರಯ್ಯ ಅವರ ಹೆಸರಿಗೆ ಗೌರವ ತರುವ ರೀತಿಯಲ್ಲಿ ಸಂಸ್ಥೆಯ ಗುಣಮಟ್ಟ ಹೆಚ್ಚಿಸಿ, ಮೇಲ್ದರ್ಜೆಗೇರಿಸಬೇಕು. ಈ ಮೂಲಕ ನಾಡಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುವುದು ನಮ್ಮ ಗುರಿ. ಬೆಂಗಳೂರಿನಲ್ಲಿ ಐಐಟಿ ಮಾದರಿಯ ಸಂಸ್ಥೆಯ ಕೊರೆತೆಯನ್ನು ನೀಗಿಸಲು ಅದಕ್ಕಿಂತಲೂ ಶ್ರೇಷ್ಠ ಗುಣಮಟ್ಟದ ಸಂಸ್ಥೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
"ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜನಿಯರಿಂಗ್ ಕಾಲೇಜ(ಯುವಿಸಿಇ)ಯನ್ನು ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನಡುವೆ ವಿಭಜಿಸಿದ ನಂತರ ಉದ್ಭವವಾಗಿದ್ದ ಸಮಸ್ಯೆಗೆ ರಂಗನಾಥ ಸಮಿತಿಯ ವರದಿ ಪರಿಹಾರ ಸೂಚಿಸಿದೆ. ಈ ಸಮಿತಿಯ ಶಿಫಾರಸು ಹಾಗೂ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಲಹೆಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿಶ್ವವಿದ್ಯಾಲಯದ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಲು ಹಳೆ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ ಎಂದು ಅವರು ವಿವರಿಸಿದರು.
"ತಾಂತ್ರಿಕ ವಿಶ್ವವಿದ್ಯಾಲಯಗಳ ಹಲವು ಮಾದರಿಗಳು ನಮ್ಮ ಮುಂದಿವೆ. ಎಲ್ಲ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲೂ ತಪ್ಪಾಗದಂತೆ ಸರಿಯಾದ ನಿರ್ಧಾರ ಕೈಗೊಂಡು ಯುವಿಸಿಇಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಐಐಟಿ ಪ್ರಚಲಿತವಾಗಿರುವ ಕಾರಣಕ್ಕೆ ಅದರ ಉದಾಹರಣೆ ನೀಡಲಾಗಿದೆ ಅಷ್ಟೇ. ಐಐಟಿಗಿಂತಲೂ ಉತ್ತಮವಾದ ಸಂಸ್ಥೆ ಕಟ್ಟುವುದು ನಮ್ಮ ಉದ್ದೇಶ. ಪ್ರಪಂಚಕ್ಕೆ ಮಾದರಿಯಾಗಬಲ್ಲ ಜ್ಞಾನಿಗಳು ನಮ್ಮಲ್ಲಿದ್ದಾರೆ ಅವರ ಜತೆ ಸಮಾಲೋಚನೆ ನಡೆಸಿ ಉತ್ತಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.