ಕೊಪ್ಪಳ ಜಿಲ್ಲೆಯಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಟಿತ- ವಿರುಪಾಕ್ಷಪ್ಪ ಸಿಂಗನಾಳ ಆರೋಪ
ಗಂಗಾವತಿ 09 : .ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ವೈಫಲ್ಯದಿಂದಾಗಿ ಗಂಗಾವತಿ ವಿಧಾನಸಭೆ ಕ್ಷೇತ್ರ ಸೇರಿದಂತೆ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಂಪೂರ್ಣ ಕುಂಟಿತವಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ನೇರವಾಗಿ ಆರೋಪಿಸಿದ್ದಾರೆ.
ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಅಭಿವೃದ್ಧಿ ನಿರ್ಲಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಧಿಕಾರ ನಡೆಸಿದ್ದ ಭಾರತೀಯ ಜನತಾ ಪಕ್ಷ ಕೊಪ್ಪಳ ಜಿಲ್ಲೆ ಎಲ್ಲಾ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿತ್ತು. ಕೊಪ್ಪಳದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ, ವಿವಿಧ ಇಲಾಖೆಯ ವಸತಿ ನಿಲಯ ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಕಳೆದ 2023ರಲ್ಲಿ ಬಿಜೆಪಿ ಸರಕಾರದ ಬಗ್ಗೆ ಸುಳ್ಳು ಆರೋಪ ಮಾಡಿ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಒಂದುವರೆ ವರ್ಷದಲ್ಲಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಗಂಗಾವತಿ ಕ್ಷೇತ್ರ ಸೇರಿದಂತೆ ಕೊಪ್ಪಳ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯನ್ನು ಮರೆತುಬಿಟ್ಟಿದೆ.
ಸಚಿವ ಶಿವರಾಜ ತಂಗಡಗಿ ಅವರು ಬೆಂಗಳೂರಿನಿಂದ ನೇರವಾಗಿ ಕೊಪ್ಪಳಕ್ಕೆ ಬಂದು ನೆಪಕ್ಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೇರವಾಗಿ ತಮ್ಮ ಸ್ವಕ್ಷೇತ್ರ ಕಾರಟಗಿಗೆ ತೆರಳಿ ಮರುದಿನ ಬೆಂಗಳೂರಿಗೆ ಹೋಗಿಬಿಡುತ್ತಾರೆ. ತಂಗಡಗಿ ಅವರು ತಾವು ಜಿಲ್ಲಾ ಉಸ್ತುವಾರಿ ಸಚಿವರೆಂಬುದನ್ನೇ ಬರೆತುಬಿಟ್ಟಿದ್ದು, ಜಿಲ್ಲೆಯ ಇನ್ನಿತರ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಗ್ಯಾರಂಟಿ ಯೋಜನೆಯಿಂದಾಗಿ ಕಾಂಗ್ರೆಸ್ ಸರಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನ ಬರುತ್ತಿಲ್ಲ. ಕನಿಷ್ಟ ಪಕ್ಷ ಇರುವ ಅನುದಾವನ್ನಾದರೂ ಸದ್ಬಳಕೆ ಮಾಡಿ ಅಭಿವೃದ್ಧಿ ಮಾಡಲು ಸಚಿವ ತಂಗಡಗಿ ಯೋಚನೆ ಮಾಡುತ್ತಿಲ್ಲ. ವಾರಕ್ಕೊಮ್ಮೆ ಬರುವ ತಂಗಡಗಿ ಬಿಜೆಪಿ ನಾಯಕರು, ಮೋದಿ ವಿರುದ್ಧ ಮಾಧ್ಯಮದಲ್ಲಿ ಹೇಳಿಕೆ ನೀಡಿ ಮರೆಯಾಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಜನತೆ ಸಚಿವರು ಮತ್ತು ಕಾಂಗ್ರೆಸ್ ಸರಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದರ ಜೊತೆಗೆ ಸರಕಾರದ ನಡೆಯ ಬಗ್ಗೆ ನಿರಾಶಕ್ತಿ ಹೊಂದುತ್ತಿದ್ದಾರೆ ಎಂದು ವಿರುಪಾಕ್ಷಪ್ಪ ಸಿಂಗನಾಳ ಆರೋಪಿಸಿದರು.
ಮುಂದುವರೆದು ಮಾತನಾಡಿದ ಅವರು ಐತಿಹಾಸಿಕ ಅಂಜನಾದ್ರಿ ಸೇರಿದಂತೆ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಬೇಕೆಂಬ ತಮ್ಮದೇ ಆದ ಕಲ್ಪನೆಯನ್ನು ಹೊಂದಿರುವ ಶಾಸಕ ಗಾಲಿ ಜನಾರ್ಧನರೆಡ್ಡಿಗೆ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಹಕಾರ ನೀಡುತ್ತಿಲ್ಲ. ಗಂಗಾವತಿ ಕ್ಷೇತ್ರಕ್ಕೆ ಕೆಕೆಆರಿ್ಡ, ನಗರೋತ್ಥಾನ ಯೋಜನೆ ಸೇರಿದಂತೆ ಸರಕಾರದ ಹಲವು ಯೋಜನೆಗಳ ಅನುದಾನ ಮಂಜೂರು ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ ಮಾಡುತ್ತಿದ್ದಾರೆ. ಸರಕಾರ ಮತ್ತು ಸಚಿವರು ಅಭಿವೃದ್ಧಿ ವಿಷಯದಲ್ಲಿ ಪಕ್ಷ ರಾಜಕಾರಣ ಮಾಡುತ್ತಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ ಶಾಕರಿದ್ದು, ಅನುದಾನ ಬಿಡುಗಡೆ ಮಾಡಿದರೆ ಅವರ ಹೆಸರು ಬರುತ್ತದೆ ಎಂಬ ಕಾರಣಕ್ಕೆ ನಿರ್ಲಕ್ಷ ಮಾಡುತ್ತಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ತಮ್ಮ ಸ್ವಪಕ್ಷದ ಮಾಜಿ ಶಾಸಕಇಕ್ಬಾಲ್ ಅನ್ಸಾರಿ ಹೇಳಿದಂತೆ ನಡೆದುಕೊಳ್ಳುತ್ತಿರುವ ಮುಖ್ಯಮಂತ್ರಿಗಳು ಮತ್ತು ಸಚಿವ ಶಿವರಾಜ ತಂಗಡಗಿ ಅಭಿವೃದ್ಧಿಯಲ್ಲಿ ಕುಂಟಿತ ಮಾಡುತ್ತಿದ್ದಾರೆ.
ಸಚಿವರಾಗಿ ಒಂದುವರೆ ವರ್ಷವಾದರೂ ಗಂಗಾವತಿ ಕ್ಷೇತ್ರದ ಕಡೆ ಕಾಲಿಟ್ಟಿಲ್ಲ. ಆದರೂ ಸರಕಾರ ಅಭಿವೃದ್ಧಿ ಮಾಡುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇತ್ತೀಚಿಗೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವನ್ನೆ ಸರಕಾರದ ಅಭಿವೃದ್ಧಿಗೆ ಜನ ಮನ್ನಣೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಸರಕಾರದ ಎಲ್ಲಾ ಸಚಿವರು ಚುನಾವಣೆಯಲ್ಲಿ ಬಿಡು ಬಿಟ್ಟು ಹಣದ ಹೊಳೆ ಹರಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದಾರೆ. 136 ಸ್ಥಾನ ಗೆದ್ದಿದ್ದೇವೆ ಎಂಬ ಅಹಂನಲ್ಲಿರುವ ಕಾಂಗ್ರೆಸ್ ಸರಕಾರದ ಎಲ್ಲಾ ಸಚಿವರು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ವಾಲ್ಮೀಕಿ ಹಗರಣ, ಮೂಡಾ ಹಗರಣ, ಅಬಕಾರಿ ಹಗರಣ, ವಕ್ಫ್ ಗೋಲ್ ಮಾಲ್, ಒಂದು ವರ್ಗದ ಓಲೈಕೆ, ಬಿಪಿಎಲ್ ರದ್ದು ಮಾಡಿರುವ ಪ್ರಕರಗಳಿಂದಾಗಿ ರಾಜ್ಯದ ಜನತೆ ಸಿದ್ಧರಾಮಯ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರಸ್ತೆ ಹಾಳಾಗಿದ್ದು, ದುರಸ್ತಿಗೆ ಅನುದಾನ ಬರುತ್ತಿಲ್ಲ. ಇದರ ಬಗ್ಗೆ ಸಚಿವ ತಂಗಡಗಿ ಯೋಚನೆ ಮಾಡಲಿ ಎಂದು ಸಿಂಗನಾಳ ತಿಳಿಸಿದ್ದಾರೆ.