ತಂತ್ರಾಂಶಾಧಾರಿತ ಕೌಶಲಗಳನ್ನು ಬೆಳೆಸಿಕೊಳ್ಳಿ : ವಿದ್ಯಾರ್ಥಿಗಳಿಗೆ ಶಾಸಕ ಬೆಲ್ಲದ ಸಲಹೆ

ತಂತ್ರಾಂಶಾಧಾರಿತ ಕೌಶಲಗಳನ್ನು ಬೆಳೆಸಿಕೊಳ್ಳಿ : ವಿದ್ಯಾರ್ಥಿಗಳಿಗೆ ಶಾಸಕ ಬೆಲ್ಲದ ಸಲಹೆ Develop software-based skills: MLA Bella's advice to students

ಲೋಕದರ್ಶನ ವರದಿ 

ಹುಬ್ಬಳ್ಳಿ 19 : ಇಂದಿನ ಸ್ಪರ್ಧಾತ್ಮಕ ಕಾರ​‍್ೊರೇಟ್ ಯುಗದಲ್ಲಿ ಉತ್ತಮ ಉದ್ಯೋಗ ಸಂಪಾದಿಸಲು, ಜೊತೆಗೆ ಅದನ್ನು ಸಮರ್ಥವಾಗಿ ನಿರ್ವಹಿಸಿ ಉಳಿಸಿಕೊಳ್ಳಲು ಸಮಯಪ್ರಜ್ಞೆ, ಕಾರ್ಯಕ್ಷಮತೆ, ವೃತ್ತಿಶಿಸ್ತು, ಸಂವಹನ ಜಾಣ್ಮೆ, ವೃತ್ತಿಪೂರಕ ಉನ್ನತ ಗುಣಗಳೊಂದಿಗೆ ವಿದ್ಯಾರ್ಥಿಗಳು ತಂತ್ರಾಂಶಾಧಾರಿತ ಕೌಶಲಗಳನ್ನು ಬೆಳೆಸಿಕೊಳ್ಳಬೇಕೆಂದು ವಿಧಾನಸಭೆಯ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಸಲಹೆ ನೀಡಿದರು.  

ಅವರು ರವಿವಾರ ಗ್ಲೋಬಲ್ ಎಜುಕೇರ್ ಪ್ರತಿಷ್ಠಾನದ ಗ್ಲೋಬಲ್ ಕಾಲೇಜ್ ಆಫ್ ಮ್ಯಾನೇಜ್ಮೆಂಟ್, ಐಟಿ ಮತ್ತು ಕಾಮರ್ಸ್‌ನ ಬಿಬಿಎ ಹಾಗೂ ಬಿಸಿಎ ವಿಭಾಗಗಳ ವತಿಯಿಂದ ನಗರದ ಎನ್‌. ಬಿ. ಹಿರೇಮಠ ಮೆಮೋರಿಯಲ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಕರೀಯರ್ ಕನೆಕ್ಟ್‌ 2ಕೆ26-ಪೂಲ್ ಕ್ಯಾಂಪಸ್ ಡ್ರೈವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವಲ್ಲಿ ಬೆಂಗಳೂರಿನ ವೊಲ್ಟನ್ ಆಕ್ಸೆಸ್ ಹಾಗೂ ಪ್ಲೇಸ್‌ಮೆಂಟ್ ಸೆಲ್ ತಂಡದ ಪ್ರಯತ್ನಗಳನ್ನು ಅವರು ವಿಶೇಷವಾಗಿ ಶ್ಲಾಘಿಸಿದರು. 

ವಿದ್ಯಾರ್ಥಿಗಳನ್ನು ಉದ್ಯೋಗಾವಕಾಶಗಳೊಂದಿಗೆ ಸಂಪರ್ಕಿಸುವ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ಆಡಳಿತ ಮಂಡಳಿ, ಪ್ರಾಂಶುಪಾಲರು, ಪ್ಲೇಸ್‌ಮೆಂಟ್ ಸಂಯೋಜಕರು ಹಾಗೂ ಸಂಘಟನಾ ತಂಡವನ್ನು ಬೆಲ್ಲದ ಅಭಿನಂದಿಸಿದರು. ಈ ಮಹತ್ವದ ನೇಮಕಾತಿ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಕಂಪನಿಗಳು ಹಾಗೂ 2000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಹುಬ್ಬಳ್ಳಿ, ಧಾರವಾಡ, ನವಲಗುಂದ, ನರಗುಂದ ಹಾಗೂ ಇತರೇ ಸುತ್ತಮುತ್ತಲಿನ ಪ್ರದೇಶಗಳಿಂದ ಭಾಗವಹಿಸಿದ್ದರು.  

ಆಶಯ ಭಾಷಣ ಮಾಡಿದ ಗ್ಲೋಬಲ್ ಕಾಲೇಜ ಪ್ರಿನ್ಸಿಪಾಲ್ ಡಾ. ಅಶ್ವಿನಿಕುಮಾರ ಕೋಟಿ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಶ್ರೇಷ್ಠ ಕೌಶಲಾಧಾರಿತ ಶಿಕ್ಷಣ ನೀಡಿಕೆಯೊಂದಿಗೆ ಅವರು ಕಾರ​‍್ೊರೇಟ್ ಕ್ಷೇತ್ರದಲ್ಲಿ ಮುನ್ಹೆಜ್ಜೆ ಇಡಲು ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ತೀವ್ರ ಅಗತ್ಯತೆ ಇದೆ. ಸಾಂಪ್ರದಾಯಿಕ ಶಿಕ್ಷಣ ಹೊಂದಿದ ವಿದ್ಯಾರ್ಥಿಗಳಿಗೆ ವಿಭಿನ್ನ ಉದ್ಯಮಗಳಲ್ಲಿ ಸೂಕ್ತ ಸೇವಾ ಅವಕಾಶಗಳನ್ನು ಕಲ್ಪಿಸುವಲ್ಲಿ ಶಿಕ್ಷಣ ತಜ್ಞರು ಹೊಸತು ಯೋಜನೆ-ಯೋಚನೆಗಳನ್ನು ರೂಪಿಸಿ ಕಾರ್ಯೋನ್ಮುಖರಾಗಬೇಕೆಂದು ಮನವಿ ಮಾಡಿದರು. 

ಡೀನ್ ಡಾ. ಮಹೇಶ್ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳ ಕಲ್ಯಾಣ ಹಾಗೂ ವೃತ್ತಿ ಅಭಿವೃದ್ಧಿಗಾಗಿ ಇಂತಹ ದೊಡ್ಡ ಮಟ್ಟದ ಪ್ಲೇಸ್‌ಮೆಂಟ್ ಕಾರ್ಯಕ್ರಮಗಳನ್ನು ಆಯೋಜಿಸಿರುವ ಸಂಸ್ಥೆಯ ಪ್ರಯತ್ನಗಳನ್ನು ಶ್ಲಾಘಿಸಿದರು.  ಬೆಂಗಳೂರಿನ ವೊಲ್ಸ್ಟನ್ ಆಕ್ಸೆಸ್ ನಿರ್ದೇಶಕಿ ಜಯಪ್ರಿಯಾ ಎಸ್‌. ಉದ್ಯಮ ಕ್ಷೇತ್ರದ ನೀರೀಕ್ಷೆಗಳು ಹಾಗೂ ವೃತ್ತಿಜೀವನ ಸಿದ್ಧತೆ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದರು.  

ಗ್ಲೋಬಲ್ ಎಜುಕೇರ್ ಪ್ರತಿಷ್ಠಾನದ ಅಧ್ಯಕ್ಷ ಜಿ.ಎನ್‌. ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಪ್ರೊ.ಸೌಮ್ಯಶ್ರೀ ಎಂ., ಪ್ರೊ. ಸಂತೋಷ ಹಲ್ಯಾಳ, ಪ್ರೊ. ಮೇರಿ ಎಂ. ಸೇರಿದಂತೆ ವಿವಿಧ ಅಧ್ಯಾಪಕರು, ಗಣ್ಯರು, ನೇಮಕಾತಿದಾರರು ಹಾಗೂ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿಧಾನಸಭೆಯ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರನ್ನು ಗ್ಲೋಬಲ್ ಕಾಲೇಜು ವತಿಯಿಂದ ಗೌರವಿಸಲಾಯಿತು.