38 ಬಾರಿ ರಕ್ತದಾನ ಮಾಡಿದ ಯುವಕ ದೇವರಾಜ್

38 ಬಾರಿ ರಕ್ತದಾನ ಮಾಡಿದ ಯುವಕ ದೇವರಾಜ್  Devaraj a young man who has donated blood 38 times

ತಾಳಿಕೋಟಿ 07:  ತಾಲೂಕಿನ ಶಳ್ಳಗಿ ಗ್ರಾಮದ ಸಾಮಾಜಿಕ ಯುವ ಕಾರ್ಯಕರ್ತ ದೇವರಾಜ್ ನಾನಾಗೌಡ ದೇಸಾಯಿ ಇವರು 38ನೇ ಬಾರಿ ರಕ್ತದಾನ ಮಾಡಿ ಜನರ ಮೆಚ್ಚುಗೆಗೆ ಪಾತರಾಗಿದ್ದಾರೆ. ತಾಳಿಕೋಟಿ ತಾಲೂಕಿನ ಶಳ್ಳಗಿ ಗ್ರಾಮದ ಕ್ರಿಯಾಶೀಲ ಯುವಕ ದೇವರಾಜ್ ನಾನಾಗೌಡ ದೇಸಾಯಿ ಅವರು ರಕ್ತದಾನ ಶಿಬಿರಗಳು ಎಲ್ಲಿಯೇ ಹಮ್ಮಿಕೊಳ್ಳಲಿ ಅಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನವನ್ನು ಮಾಡುತ್ತಲೇ ಬಂದಿದ್ದಾರೆ ಇಲ್ಲಿಯವರೆಗೆ 37 ಬಾರಿ ರಕ್ತದಾನ ಮಾಡಿದ್ದಾರೆ.  

ತಾಳಿಕೋಟಿ ಪಟ್ಟಣದಲ್ಲಿ ಖಾಸ್ಗತೇಶ್ವರ ಜಾತ್ರೆ ನಿಮಿತ್ಯವಾಗಿ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಬಿ.ಎಲ್‌.ಡಿ.ಇ. ವೈದ್ಯಕೀಯ ಹಾಗೂ ಸಂಶೋಧನಾ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಇವರು ಮತ್ತೊಂದು ಬಾರಿ ರಕ್ತದಾನ ಮಾಡಿ 38 ಬಾರಿ ರಕ್ತದಾನ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಶಿಬಿರದ ಮೇಲ್ವಿಚಾರಕ ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಯುವಕ ದೇವರಾಜ್ ದೇಸಾಯಿ ಅವರ ಈ ಕಾರ್ಯದ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ ರಕ್ತದಾನ ಜೀವದಾನಕ್ಕೆ ಸಮಾನವಾಗಿದೆ. ವಿವಿಧ ಘಟನೆಗಳಲ್ಲಿ ರಕ್ತದ ಕೊರತೆಯಿಂದಾಗಿ ಅದೆಷ್ಟೋ ಜನರು ತಮ್ಮ ಅಮೂಲ್ಯವಾದ ಜೀವಗಳನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ರಕ್ತದಾನ ಬಹುದೊಡ್ಡ ಕಾರ್ಯವಾಗಿದೆ. ಇಂದಿನ ಯುವಕರಿಗೆ ರಕ್ತದಾನಿ ದೇವರಾಜ್ ದೇಸಾಯಿ ಅವರು ಮಾದರಿಯಾಗಿದ್ದಾರೆ ಎಂದರು.  

38 ಬಾರಿ ರಕ್ತದಾನ ಮಾಡಿ ಯುವಕರಿಗೆ ಮಾದರಿಯಾದ ಸಾಮಾಜಿಕ ಕಾರ್ಯಕರ್ತ ದೇವರಾಜ ನಾನಾಗೌಡ ದೇಸಾಯಿ ಇವರನ್ನು ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಸನ್ಮಾನಿಸಿ ಗೌರವಿಸಿದರು. ಬಿಎಲ್‌ಡಿಇ ವೈದ್ಯಕೀಯ ಆಸ್ಪತ್ರೆಯ ರಕ್ತದಾನ ವಿಭಾಗದ ಮುಖ್ಯಸ್ಥರು ಅನುಗ್ರಹ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಶಿಬಿರಾರ್ಥಿಗಳು ಇದ್ದರು.