ದೇವರಾಜ ಅರಸು: ಸಾಮಾಜಿಕ ನ್ಯಾಯದ ಹರಿಕಾರ

ದೇವರಾಜ ಅರಸು: ಸಾಮಾಜಿಕ ನ್ಯಾಯದ ಹರಿಕಾರ  Devaraj Urs: The Herald of Social Justice


 ಬ್ಯಾಡಗಿ  22: ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ನಾಯಕರು ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಎಸ್‌.ಆರ್‌. ಪಾಟೀಲ್ ಹೇಳಿದರು.  

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಪಟ್ಟಣದ ತಹಶೀಲ್ದಾರ್ ಭವನದಲ್ಲಿ ನಡೆದ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ ಹಲವು ಮಂದಿ ಆಡಳಿತ ನಡೆಸಿದ್ದರೂ, ದೇವರಾಜ ಅರಸು ಅವರ ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳು ಇಂದಿಗೂ ಸಮಾಜದ ದುರ್ಬಲ ವರ್ಗಗಳ ಬದುಕಿಗೆ ದಾರೀದೀಪವಾಗಿವೆ. ಭೂ ಸುಧಾರಣೆಗಳ ಮೂಲಕ ಬಡ ರೈತರಿಗೆ ಭೂಮಿಯ ಹಕ್ಕು ದೊರಕಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.  

ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಶೋಷಿತ ಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಶಕ್ತಿ ತುಂಬುವ ಹಲವು ಕಾರ್ಯಕ್ರಮಗಳನ್ನು ಅರಸು ಅವರು ಜಾರಿಗೆ ತಂದರು. ಇಂದಿನ ಯುವ ಪೀಳಿಗೆ ಅವರ ಜೀವನ, ಚಿಂತನೆ ಹಾಗೂ ಜನಪರ ಆಡಳಿತದ ಆದರ್ಶಗಳನ್ನು ಅರಿತುಕೊಳ್ಳಬೇಕು ಎಂದರು.  

ಸರ್ಕಾರದ ವಿವಿಧ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಬಲಪಡಿಸಬೇಕು. ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.  

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್‌ ಮಾತನಾಡಿ, ಬಡವರ ಪರವಾಗಿ ಧ್ವನಿ ಎತ್ತಿದ ದೇವರಾಜ ಅರಸು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ ಎಂದರು.  

ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ವಕೀಲ ಪ್ರಕಾಶ್ ಬನ್ನಿಹಟ್ಟಿ, ಹಿಂದುಳಿದ ವರ್ಗದ ಅಧಿಕಾರಿ ಎಸ್‌.ವಿ. ಬಳ್ಳಾರಿ, ಸಿಪಿಐ ಎಂ.ಬಿ. ಚಿಕ್ಕಣ್ಣನವರ್, ಪಿಎಸ್‌ಐ ಭಾರತಿ ಕುರಿ, ಸುರೇಶ್ ಹುಲಬುಟ್ಟಿ, ಅಬ್ದುಲ್ ಮುನಾಫ್, ರಮೇಶ್ ಕೋಟಿಯವರ್, ರಾಜು ಕಾಯ್ಕದ, ನಿಂಗಪ್ಪ ಹೆಗ್ಗಣ್ಣನವರ್ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.