ಅಪ್ರಾಪ್ತ ಬಾಲಕನನ್ನು ಅಪಹರಿಸಿದ್ದವನ ಬಂಧನ

ಬೆಂಗಳೂರು, ಜ 29 :   ಖಾಸಗಿ ಟಿವಿ ವಾಹಿನಿವೊಂದರ ಕ್ರೈ ಧಾರವಾಹಿಯಿಂದ ಪ್ರೇರಣೆಗೊಂಡು ಅಪ್ರಾಪ್ತ ಬಾಲಕನನ್ನು ಅಪಹರಿಸಿದ್ದ ಯುವಕನನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ನಗರದ ಬಸವನಗುಡಿ ಯ ಚಿರಾಗ್ ಆರ್ ಮೆಹ್ತಾ (21) ಬಂಧಿತ ಆರೋಪಿ. 

ಅಂಗಡಿ ಮಾಲೀಕರೊಬ್ಬರ ಅಪ್ರಾಪ್ತ ಬಾಲಕನನ್ನು ಆರೋಪಿ ಅಪಹರಿಸಿದ್ದ.

ಮಂಗಳವಾರ ಮಧ್ಯಾಹ್ನ 3ರ ವೇಳೆ ಕ್ಯಾತರಿನ್ ಸ್ಕೂಲ್‌ನಿಂದ ಮನೆಗೆ ಬಂದಿದ್ದ 4ನೇ ತರಗತಿಯ ಬಾಲಕನನ್ನು ಬೌನ್ಸ್ ಸ್ಕೂಟರ್‌ನಲ್ಲಿ ಆರೋಪಿ ಅಪಹರಿಸಿ ಪರಾರಿಯಾಗಿದ್ದನು. 

ಬಾಲಕ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಅವರ ತಂದೆ ಹೀರಾಲಾಲ್ ಅವರು ಕೂಡಲೇ  ಕಾಟನ್ ಪೇಟೆ ಪೊಲೀಸರಿಗೆ  ಮಾಹಿತಿ ನೀಡಿದ್ದರು.

ಪ್ರಕರಣದ ಜಾಡು ಹಿಡಿದ ಪೊಲೀಸರು ಕೃತ್ಯ ನಡೆದ ಒಂದು ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ‌

ಐಷಾರಾಮಿ ಜೀವನ ನಡೆಸುವುದಕ್ಕಾಗಿ ಆರೋಪಿ ಖಾಸಗಿ ವಾಹಿನಿಯೊಂದರಲ್ಲಿ ಬರುವ ಅಪರಾಧ ಆಧಾರಿತ ಧಾರವಾಹಿಯಿಂದ ಪ್ರೇರಣೆಗೊಂಡು ಬಾಲಕನನ್ನು ಅಪಹರಣ ಮಾಡಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. 

ಇನ್ಸ್‌ಪೆಕ್ಟರ್ ಟಿ.ಸಿ. ವೆಂಕಟೇಶ್ ಅವರು ಲ್ಯಾವಿಲಿ ರಸ್ತೆಯ ಬಳಿಯಿದ್ದ ಆರೋಪಿಯನ್ನು ಕೇವಲ 1 ಗಂಟೆಯೊಳಗೆ ಬಂಧಿಸಿ ಬಾಲಕನನ್ನು ರಕ್ಷಿಸಿದ್ದಾರೆ.

ಬಾಲಕನ ತಂದೆ ಹೀರಾಲಾಲ್,  ಚಿಕ್ಕಪೇಟೆಯಲ್ಲಿ ಎಲೆಕ್ಟ್ರಿಕ್ ಅಂಗಡಿ ಇಟ್ಟುಕೊಂಡಿದ್ದರು. ಅವರ ಬಳಿ ಹೆಚ್ಚಿನ ಹಣವಿರುವುದನ್ನು ಗಮನಿಸಿ ಆರೋಪಿಯು ಬಾಲಕನನ್ನು ಅಪಹರಣ ಮಾಡಲು ಸಂಚು ರೂಪಿಸಿದ್ದಾನೆ.

ಅಲ್ಲದೇ, ಆರೋಪಿ‌ ಚಿರಾಗ್  ತಂದೆ ರಾಕೇಶ್ ಅವರದು ವೆಡ್ಡಿಂಗ್‌ಕಾರ್ಡ್ ಅಂಗಡಿ ಇದೆ. ಹೀಗಾಗಿ ಅಲ್ಲಿಗೆ ಬಂದು ಹೋಗುತ್ತಿದ್ದ ಚಿರಾಗ್,  ಬಾಲಕನನ್ನು ಗಮನಿಸಿ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.