ಮನೆಗಳ್ಳರ ಬಂಧನ : ಆಭರಣ ಜಪ್ತಿ

ಕೊಪ್ಪಳ 22 : ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣೆಯ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ವೃತ್ತಿ ಪರವಾಗಿ ಮನೆಗಳ್ಳತನ ಮಾಡುವ ಐದು ಜನ ಮನೆಗಳ್ಳರನ್ನು ಬಂಧಿಸಿ, ಮೂರು ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಸುಮಾರು 5 ಲಕ್ಷ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಲಾಗಿದೆ.

ಗಂಗಾವತಿ ನಗರದ ಅಮರ ಭಗತ್ಸಿಂಗ್ ನಗರ, ಹಿರೇಜಂತಕಲ್, ವಡ್ಡರಹಟ್ಟಿಯ ಸಮರ್ಥ ಮೋಟಾರ್ಸ್ ಹಿಂಭಾಗದಲ್ಲಿ ಮನೆಗಳ್ಳತನ ನಡೆದಿದ್ದು, ಮನೆಗಳ್ಳರ ಪತ್ತೆಗಾಗಿ ಎಸ್.ಪಿ ಸಂಗೀತಾ ಅವರು ಗಂಗಾವತಿ ನಗರ ಪೊಲೀಸ್ ಠಾಣೆಯ ಪಿ.ಐ ಉದಯರವಿ, ಎ.ಎಸ್.ಐ ತಿಪ್ಪಣ್ಣ ನಾಟೇಕರ್, ಚಿರಂಜೀವಿ, ವಿಶ್ವನಾಥ, ಮೈಲಾರಪ್ಪ, ರಾಘವೇಂದ್ರ, ಅಜೀಜಸಾಬ, ನರಸಪ್ಪ ಸೇರಿದಂತೆ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ, ವೃತ್ತಿಪರವಾಗಿ ತನಿಖೆ ಕೈಗೊಂಡು ಆರೋಪಿಗಳಾದ ಗಂಗಾವತಿ ನಗರದ ಅಮರ ಭಗತ್ಸಿಂಗ್ ನಗರದ ಧನರಾಜ ತಂದೆ ಲಕ್ಷ್ಮಣರಾವ್ (19 ವರ್ಷ), ಮಂಜುನಾಥ ಅಲಿಯಾಸ ವಾಂಟೆಡ್ ಮಂಜ ತಂದೆ ವಿರೇಶ (20 ವರ್ಷ), ಗಂಗಾವತಿಯ ಹಮಾಲರ ಕಾಲೋನಿಯ ಹುಲ್ಲೇಶ ತಂದೆ ದೇವೇಂದ್ರಪ್ಪ ಭಜಂತ್ರಿ (22 ವರ್ಷ), ಗಂಗಾವತಿಯ ವಿವೇಕಾನಂದ ಕಾಲೋನಿಯ ರಮೇಶ ಅಲಿಯಾಸ ರಾಮ ತಂದೆ ಪುಂಡಲೀಕಪ್ಪ ಇವರನ್ನು ಬಂಧಿಸಲಾಗಿದೆ.

ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ದಸ್ತಗಿರಿ ಮಾಡಿದ್ದು, 170 ಗ್ರಾಂ ಬಂಗಾರದ ಆಭರಣಗಳು ( ಒಂದು ಮಾಂಗಲ್ಯ ಸರ, ಒಂದು ಬಂಗಾರದ ಸರ, ಕಿವಿಯೋಲೆ, ಬೋರಮಳ ಸರ, ಉಂಗುರ ಹಾಗೂ 50 ಗ್ರಾಂ ಬೆಳ್ಳಿಯ ಆಭರಣ ( ಕಾಲ್ಗೆಜ್ಜೆ ಮತ್ತು ಕುಂಕುಮ ಭರಣಿ) ಹೀಗೆ ಒಟ್ಟು ಅಂದಾಜು ರೂ. 05 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿ ಪ್ರಕರಣವನ್ನು ಬೇಧಿಸಿದ್ದಾರೆಂದು ಪ್ರಕಟಣೆ ತಿಳಿಸಿದೆ.