ಮಳೆ ಕೊರತೆ ಹಿನ್ನೆಲೆ ಬೆಳೆ ಪರೀಶೀಲಿಸಿದ ಜಿಲ್ಲಾಧಿಕಾರಿ

ಮಳೆ ಕೊರತೆ ಹಿನ್ನೆಲೆ ಬೆಳೆ ಪರೀಶೀಲಿಸಿದ ಜಿಲ್ಲಾಧಿಕಾರಿ  Deputy Commissioner inspects crops amidst rain deficit

ಲೋಕದರ್ಶನ ವರದಿ

ದೇವರಹಿಪ್ಪರಗಿ 29: ಮುಂಗಾರು ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆನಂದ ಕೆ. ಅವರು ದೇವರಹಿಪ್ಪರಗಿ ತಾಲೂಕಿನ ವಿವಿಧ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಯನ್ನು ಪರೀಶೀಲಿಸಿದರು.  

ಪಟ್ಟಣದ ಸಮೀಪದ ಅವುಗೇಶ್ವರ ತಪೋಧಾನ ಪರದೇಶಿ ಮಠದ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಹಾಗೂ ಇತರ ಜಮೀನುಗಳಲ್ಲಿ ಬೆಳೆದ ಹತ್ತಿ ಮತ್ತು ತೊಗರಿ ಬೆಳೆಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು, ರೈತರಿಂದ ಮಳೆಯ ಕೊರತೆಯಿಂದ ಉಂಟಾದ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.  

ಈ ವೇಳೆ ಬೆಳೆ ಹಾನಿ, ನೀರಿನ ಲಭ್ಯತೆ ಹಾಗೂ ಬೆಳೆಗಳ ಬೆಳವಣಿಗೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ರೈತರಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಪರೀಶೀಲನೆ ವೇಳೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಡಿಡಿಎ ಚಂದ್ರಕಾಂತ ಪವಾರ್, ಎಡಿಎ ಪ್ರಶಾಂತ್ ಸಾನೆ, ತಹಶೀಲ್ದಾರ್ ನಿಂಗಣ್ಣ ಬಿರಾದಾರ, ಕೃಷಿ  ಅಧಿಕಾರಿ ಶರಣಗೌಡ ಬಿರಾದಾರ, ರಾಮಾನಂದ ಚಕಡಿ, ಪರದೇಶಿ ಮಠದ ಶ್ರೀಗಳು, ಸತೀಶ್, ಮುರುಗೇಂದ್ರ ಇಂಡಿ, ಸಂಗಮೇಶ್ ಮಸಬಿನಾಳ, ವೀರಭದ್ರಯ್ಯ ಇಂಡಿ, ಕಾಶು ಕುದರಿ, ಲಕ್ಷ್ಮಣ ವಡ್ಡರ್ ಸೇರಿದಂತೆ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.