ದಾಂಡೇಲಿಯಲ್ಲಿ ಅಕ್ರಮ ಕಟ್ಟಡ ತೆರವು: ನಗರಸಭೆ ಕಾರ್ಯಾಚರಣೆ

ದಾಂಡೇಲಿಯಲ್ಲಿ ಅಕ್ರಮ ಕಟ್ಟಡ ತೆರವು: ನಗರಸಭೆ ಕಾರ್ಯಾಚರಣೆ Demolition of illegal structures in Dandeli: City Council operation

ಲೋಕದರ್ಶನ ವರದಿ 

  ದಾಂಡೇಲಿ 17: ನಗರದ ಅಂಬೇವಾಡಿ ಮುಖ್ಯ ಸರ್ಕಲ್ ಸಮೀಪ ನಗರಸಭೆಗೆ ಸೇರಿದ ಬೆಲೆಬಾಳುವ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡವನ್ನು ದಾಂಡೇಲಿ ನಗರಸಭೆ ಶುಕ್ರವಾರ ಬೆಳಗ್ಗೆ ತೆರವುಗೊಳಿಸಿದೆ.  

ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಸೂಚನೆಯ ಮೇರೆಗೆ ನಗರಸಭೆ ಪೌರಾಯುಕ್ತ ವಿವೇಕ ಬನ್ನೆ ಅವರ ನೇತೃತ್ವದಲ್ಲಿ ಸ್ಥಳ ಪರೀಶೀಲನೆ ನಡೆಸಿ, ನಗರಸಭೆ ಆಸ್ತಿ ಅತಿಕ್ರಮಣ ಹಾಗೂ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.  

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪೌರಾಯುಕ್ತರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಜೆಸಿಬಿ ಯಂತ್ರದ ಮೂಲಕ ಅಕ್ರಮ ಕಟ್ಟಡವನ್ನು ತೆರವುಗೊಳಿಸಿದರು. ಕೈಗೊಂಡ ಕ್ರಮದ ಕುರಿತು ಪಾಲನಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.  

ಇತ್ತೀಚೆಗೆ ಅಂಬೇವಾಡಿ ಹಾಗೂ ಸುಭಾಷ್ ನಗರ ಪ್ರದೇಶಗಳಲ್ಲಿ ನಗರಸಭೆಯ ಜಮೀನು ಅತಿಕ್ರಮಣ ಮತ್ತು ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಸಾರ್ವಜನಿಕರು ಹಾಗೂ ಮಾಜಿ ಜನಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡಿದ್ದು, ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದೆ.  ನಗರಸಭೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಕಟ್ಟುನಿಟ್ಟಿನ ಕ್ರಮವು ಸರ್ಕಾರಿ ಜಮೀನು ಅತಿಕ್ರಮಿಸುವವರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.