ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರ ಎಂದು ಘೋಷಣೆಗೆ ಆಗ್ರಹಿಸಿ

ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರ ಎಂದು ಘೋಷಣೆಗೆ ಆಗ್ರಹಿಸಿ Demanding that Vijayapura district be declared fully drought-hit

ಲೋಕದರ್ಶನ ವರದಿ 

ಸೆಪ್ಟೆಂಬರ 2 ರಿಂದ ಅನಿರ್ದಿಷ್ಟ ಹೋರಾಟಕ್ಕೆ ಕರೆ 

ವಿಜಯಪುರ   28: ಸಂಪೂರ್ಣ ವಿಜಯಪುರ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡುವುದು, ಪ್ರತಿ ಎಕರೆಗೆ 50 ಸಾವಿರ ಬರಗಾಲ ಪರಿಹಾರ ಹಾಗೂ ಮಧ್ಯಂತರ ವಿಮೆ ಬಿಡುಗಡೆಗೊಳಿಸುವಂತೆ ಆಗ್ರಹಿಸಿ , ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೆಪ್ಟೆಂಬರ 2 ರಿಂದ ಅನಿರ್ದಿಷ್ಠ ಹೋರಾಟ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

2026-27 ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಸಂಪೂರ್ಣ ಕೈಕೊಟ್ಟಿರುವುದು ನಾಡಿನ ಸಮಸ್ತ ಜನತೆಗೆ ಗೊತ್ತಿರುವ ವಿಷಯ, ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಿಸಿದ ಎಲ್ಲಾ ಅಧಿಕಾರಿಗಳೊಡನೆ ಸಮೀಕ್ಷೆ ನಡೆಸಿ ಬರಗಾಲ ಇದೆ ಎಲ್ಲರಿಗೂ ಕೊಡಿಸುತ್ತೆವೆ ಎಂದು ಮಾಧ್ಯಮದ ಮೂಲಕ ಹೇಳಿದ್ದರು. ಅದರಂತೆ ಬಿ.ಜೆ.ಪಿ. ಕಾಂಗ್ರೆಸ್, ಜೆ,ಡಿ.ಎಸ್‌ನ ಮುಖಂಡರು ಜಿಲ್ಲೆಯಲ್ಲಿ ಸಮೀಕ್ಷೆ ಮಾಡಿ ಬರಗಾಲ ಘೋಷಣೆ ಮಾಡಬೇಕು, ಎಲ್ಲ ರೈತರಿಗೂ ಪರಿಹಾರ ಕೊಡಬೇಕು ಎಂದು ಹೇಳಿದ್ದಾರೆ,  

ಈಗ ವಿಜಯಪುರ ಜಿಲ್ಲೆಯ 13 ತಾಲೂಕುಗಳಲ್ಲಿ ನಿಡಗುಂದಿ, ಕೋಲಾರ ಹಾಗೂ ವಿಜಯಪುರ ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಿ ಉಳಿದ 10 ತಾಲೂಕುಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ ನಾಳೆ 2-9-2026 ರಂದು ಬುಧವಾರದಿಂದ ಅನಿರ್ದಿಷ್ಟ ಹೋರಾಟ ಮಾಡಲು ನಿರ್ಣಯಿಸಿದ್ದು, ಸಂಪೂರ್ಣ ಜಿಲ್ಲೆಯನ್ನು ಬರಗಾಲ ಎಂದು ಘೋಷಣೆ ಮಾಡಿ ಪ್ರತಿ ಎಕರೆಗೆ 50000 ಪರಿಹಾರ ಕೊಡಬೇಕು ಹಾಗೆ ಮಧ್ಯಂತರ ವಿಮೆಯನ್ನು ಬಿಡುಗಡೆ ಮಾಡಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೆವೆ ಎಂದರು.  

ಇದೇರೀತಿ ಜಿಲ್ಲೆಯಲ್ಲಿ ಇನ್ನು ಹಲವಾರು ಕೆರೆಗಳನ್ನು ಕೆರೆ ನೀರು ತುಂಬಿಸುವ ಯೋಜನೆಯಲ್ಲಿ ಕೈಬಿಡಲಾಗಿದೆ, ಅವುಗಳನ್ನು ಸೇರಿಸಿ ಜಿಲ್ಲೆಯ ಎಲ್ಲಾ ಹಳ್ಳ, ಕೊಳ್ಳ, ಕೆರೆ, ಕಾಲುವೆಗಳನ್ನು ತುಂಬಿಸಬೇಕು, ಜೋತೆಗೆ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು, ಪ್ರಧಾನಮಂತ್ರಿ ಫಸಲ ಭಿಮಾ ಯೋಜನೆಯಲ್ಲಿಯೂ ಸಾಕಷ್ಟು ಅವ್ಯವಹಾರಗಳು ಕಂಡು ಬಂದಿದ್ದು ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. 

ಈ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ 13 ತಾಲೂಕಿನ ಪದಾಧಿಕಾರಿಗಳು ಹಾಗೂ ನಾಡಿನ ಮಠಾಧಿಶರು, ಇನ್ನಿತರ ಸಮಸ್ತ ರೈತ ಸಂಘಟನೆ, ಪ್ರಗತಿಪರ ಸಂಘಟನೆ, ಮಹಿಳಾ ಸಂಘಟನೆ, ಕಾರ್ಮಿಕ ಸಂಘಟನೆ, ಕನ್ನಡಪರ ಸಂಘಟನೆ ಸೇರಿದಂತೆ ಪಕ್ಷಾತೀತವಾಗಿ ಜಾತ್ಯಾತೀತವಾಗಿ ರೈತಪರ ಎಲ್ಲಾ ಚಿಂತಕರು ಹೋರಾಟಕ್ಕೆ ಬೆಂಬಲಿಸಲು ಆಗಮಿಸುವರು ಎಂದರು. ರೈತರ ಹಿತದೃಷ್ಠಿಯಿಂದ ಈ ಮೇಲಿನ ಬೇಡಿಕೆಗಳನ್ನು ಈಡೇರಿಸುವರೆಗೂ ಈ ಹೋರಾಟ ಮುಂದುವರೆಯಲಿದೆ, ಸರ್ವರೂ ಕೈಜೊಡಿಸಬೇಕು ಎಂದು ಮನವಿ ಮಾಡಿಕೊಂಡರು.