ಹತ್ತರಗಿ ಹರಿ ಮಂದಿರದಲ್ಲಿ ಸೆ. 4ರಿಂದ ಗೋಕುಲಾಷ್ಟಮಿ ಉತ್ಸವ
Gokulashtami festival at Hattaragi Hari Mandira from September 4
ಯಮಕನಮರಡಿ 28: ಸಮೀಪದ ಹತ್ತರಗಿ: ಇಲ್ಲಿನ ಹರಿ ಮಂದಿರದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ಸೆಪ್ಟೆಂಬರ್ 4ರಿಂದ 6ರವರೆಗೆ ಗೋಕುಲಾಷ್ಟಮಿ ಉತ್ಸವ ನಡೆಯಲಿದೆ. ಸೆ. 4ರಂದು ಬೆಳಗ್ಗೆ 10 ಗಂಟೆಗೆ ಅಂತರ್ರಾಜ್ಯ ಭಜನಾ ಸ್ಪರ್ಧೆ ನಡೆಯಲಿದ್ದು, ರಾತ್ರಿ 12.30ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ತೊಟ್ಟಿಲು ತೂಗುವ ಕಾರ್ಯಕ್ರಮ, ನಾಮಕರಣ, ಕೀರ್ತನೆ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಲಿವೆ. ಸೆ. 5ರಂದು ಕನ್ನಡ ಮತ್ತು ಮರಾಠಿ ಭಜನಾ ಕಾರ್ಯಕ್ರಮಗಳೊಂದಿಗೆ ಕೀರ್ತನೆ ಹಾಗೂ ಪ್ರವಚನ ಆಯೋಜಿಸಲಾಗಿದೆ. ಸೆ. 6ರಂದು ರಥೋತ್ಸವ, ಭಜನೆ ಹಾಗೂ ಮೊಸರುಗಡಿಗೆ ಉತ್ಸವ ನಡೆಯಲಿದೆ.
ಉತ್ಸವದ ಬಳಿಕ ಪೂಜ್ಯರಿಂದ ಭಕ್ತರಿಗೆ ಆಶೀರ್ವಾದ, ಪ್ರಸಾದ ವಿತರಣೆ ನಡೆಯಲಿದ್ದು, ಭಜನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ, ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು. ಭಕ್ತರಿಗಾಗಿ ಮಹಾಪ್ರಸಾದದ ವ್ಯವಸ್ಥೆಯೂ ಮಾಡಲಾಗಿದೆ.
ಶ್ರೀಮಠವು ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು ಗಡಿ ಭಾಗದ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿದೆ. ಸದ್ಗುರು ಹರಿ ಕಾಕಾ ಗೋಸಾವಿ, ಸದ್ಗುರು ಏಕನಾಥ ಮಹಾರಾಜರ ನಂತರ ಪ್ರಸ್ತುತ ಪೀಠಾಧ್ಯಕ್ಷರಾದ ಆನಂದ ಮಹಾರಾಜ್ ಗೋಸಾವಿ ಅವರ ಮಾರ್ಗದರ್ಶನದಲ್ಲಿ ಮಠವು ಅಭಿವೃದ್ಧಿ ಹೊಂದುತ್ತಿದೆ. ಮಠದಲ್ಲಿ ಸಂಸ್ಕೃತ ಪಾಠಶಾಲೆ, ಗೋಶಾಲೆ ಹಾಗೂ ಸಂಗೀತ ಶಾಲೆ ನಡೆಯುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶಿಷ್ಯವೇತನ ನೀಡಲಾಗುತ್ತಿದೆ.
ಉತ್ಸವದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಭಕ್ತರು, ಆಕಾಶವಾಣಿ ಮತ್ತು ದೂರದರ್ಶನದ ಪ್ರಸಿದ್ಧ ಕಲಾವಿದರು, ಕೀರ್ತನಕಾರರು ಹಾಗೂ ಪ್ರವಚನಕಾರರು ಭಾಗವಹಿಸಲಿದ್ದಾರೆ. ಸಕಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಕೃಷ್ಣ ಹಾಗೂ ಸದ್ಗುರು ಹರಿ ಕಾಕಾ ಅವರ ಕೃಪೆಗೆ ಪಾತ್ರರಾಗಬೇಕೆಂದು ಆನಂದ ಮಹಾರಾಜ್ ಗೋಸಾವಿ ಮನವಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 