ವಿಜಯಪುರದಿಂದ ಹೆಚ್ಚುವರಿ ರೈಲು ಸೇವೆಗಳನ್ನು ಪ್ರಾರಂಭಿಸಲು ಆಗ್ರಹ

ವಿಜಯಪುರದಿಂದ ಹೆಚ್ಚುವರಿ ರೈಲು ಸೇವೆಗಳನ್ನು ಪ್ರಾರಂಭಿಸಲು ಆಗ್ರಹ Demand to start additional train services from Vijayapura

ವಿಜಯಪುರ 22: ಪೆಟ್ರೋಲ್ ಮತ್ತು ಡೀಸೆಲ್ ದರ ಹೊರೆಯಾಗುತ್ತಿರುವ ಈ ದಿನಗಳಲ್ಲಿ ವಿಜಯಪುರದಿಂದ ಬೆಂಗಳೂರು ಮತ್ತು ಮುಂಬೈಗೆ ಹೆಚ್ಚುವರಿ ರೈಲು ಸೇವೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಮೂಲಕ ಸಂಸದ ರಮೇಶ ಜಿಗಜಿಣಗಿ ತಮ್ಮ ಶಕ್ತಿ ತೋರಿಸಬೇಕು ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳು ಜಗತ್ತಿಗೆ ಮಾದರಿಯಾಗಿದ್ದು, ಅವುಗಳನ್ನು ಬಿಜೆಪಿ ಆಡಳಿತದಲ್ಲಿರುವ ಸರಕಾರಗಳೂ ನಕಲು ಮಾಡುತ್ತಿವೆ.  ಇಂಥ ಸಂದರ್ಭದಲ್ಲಿ ಸಂಸದರು, ರಾಜ್ಯದ ಯೋಜನೆಗಳ ಬಗ್ಗೆ ಪದೇ  ಪದೇ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.

ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡುವ ಬದಲು ವಿಜಯಪುರಕ್ಕೆ ವಂದೇ ಭಾರತ ರೈಲು ಸೇವೆಯನ್ನು  ಪ್ರಾರಂಭಿಸಲು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದ್ದಾರೆ.ಕೇಂದ್ರ ಸರಕಾರದ ವೈಫಲ್ಯದ ಪರಿಣಾಮವಾಗಿ ದಿನೇ ದಿನೇ ಪೆಟ್ರೋಲ್, ಗ್ಯಾಸ್ ಬೆಲೆಗಳು ಹೆಚ್ಚಾಗುತ್ತಿದ್ದು, ಜನಸಾಮಾನ್ಯರಿಗೆ ಹೊರೆಯಾಗುತ್ತಿವೆ.  ಪ್ರತಿನಿತ್ಯ ವಿಜಯಪುರ ಜಿಲ್ಲೆಯಿಂದ ಹತ್ತಾರು ಸರಕಾರಿ ಮತ್ತು ಖಾಸಗಿ ಬಸ್ಸುಗಳು ಬೆಂಗಳೂರಿಗೆ ಮತ್ತು ಮುಂಬೈಗೆ ಸಂಚರಿಸುತ್ತವೆ.  ಈ ಸಂದರ್ಭದಲ್ಲಿ ವಿಜಯಪುರದಿಂದ ಹೆಚ್ಚುವರಿ ರೈಲುಗಳನ್ನು ಓಡಿಸಬೇಕು.  ರೈಲುಗಳು ವಿದ್ಯುತ್ ಶಕ್ತಿಯ ಮೇಲೆ ಸಂಚರಿಸುತ್ತವೆ. 

ಇದರಿಂದ ಜನತೆಗೆ ಅನುಕೂಲವಾಗಲಿದೆ.  ಮಾತ್ರವಲ್ಲ ಪರಿಸರಕ್ಕೂ ಪೂರಕವಾಗಲಿದೆ.  ಪಬ್ಲಿಕ್ ಟ್ರಾನ್ಸಪೋರ್ಟ್‌ ಬಳಸುವುದರಿಂದ ತೈಲ ಬಳಕೆಯೂ ಕಡಿಮೆಯಾಗಲಿದೆ.  ಏಳು ಬಾರಿ ಸಂಸದರಾಗಿರುವ ಸಂಸದರು ಕೇಂದ್ರ ಸರಕಾರದಲ್ಲಿರುವ ತಮ್ಮ ವರ್ಚಸ್ಸನ್ನು ಬಳಸಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ನಾನು ಕಳೆದ ಮೂರು ವರ್ಷಗಳಿಂದ ಸತತವಾಗಿ ಪ್ರಧಾನಿ, ರೇಲ್ವೆ ಸಚಿವರು, ಹೆದ್ದಾರಿ ಸಚಿವರಿಗೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಮತ್ತು ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಉನ್ನತೀಕರಿಸಬೇಕು.  ಅಲ್ಲದೇ, ವಿಜಯಪುರದಿಂದ ಬೆಂಗಳೂರಿಗೆ ಸಂಚರಿಸುವ ರೈಲು ಸಂಚಾರದ ಅವಧಿಯನ್ನು ಕಡಿಮೆ ಮಾಡಬೇಕು ಎಂದು ಪತ್ರ ಬರೆದು ಗಮನ ಸೆಳೆದಿದ್ದೇನೆ.   

ಹೀಗಾಗಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಸಂಸದರು ತಮ್ಮ ಪ್ರಭಾವವನ್ನು ಬಳಸಿ ಕೇಂದ್ರದಿಂದ ಬರಬೇಕಾದ ಯೋಜನೆಗಳನ್ನು ಜಿಲ್ಲೆಯ ಜನರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.  ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರಕಾರಗಳೂ ಅವುಗಳನ್ನು ಜಾರಿ ಮಾಡುತ್ತಿವೆ.  ಇದನ್ನು ಸಂಸದರು ತಿಳಿಯಬೇಕು.  ಮಾತನಾಡುವುದಕ್ಕಿಂತ ನಾವು ಮಾಡುವ ಕೆಲಸಗಳು ಜನಮಾನಸದಲ್ಲಿ ಉಳಿಯುತ್ತವೆ.  ಹೀಗಾಗಿ ವಂದೇ ಭಾರತ ರೈಲು ಸೇವೆ ಮತ್ತು ಹೆಚ್ಚುವರಿ ರೈಲುಗಳ ಸಂಚಾರ ಪ್ರಾರಂಭಿಸಲು ಸಂಸದರು ಕ್ರಮ ಕೈಗೊಂಡರೆ ಬಸವನಾಡಿನ ಇತಿಹಾಸದಲ್ಲಿ ಅವರ ಕೆಲಸ ಕಾರ್ಯಗಳು ಶಾಶ್ವತವಾಗಿ ಉಳಿಯಲಿವೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.