ಸರ್ಕಾರಿ ಅಭಿಯಂತರರ ಮಹಾ ವಿದ್ಯಾಲಯ ಸ್ಥಾಪಿಸಲು ಆಗ್ರಹ
Demand to establish a government engineering college
ಸರ್ಕಾರಿ ಅಭಿಯಂತರರ ಮಹಾ ವಿದ್ಯಾಲಯ ಸ್ಥಾಪಿಸಲು ಆಗ್ರಹ
ವಿಜಯಪುರ, 06 : ವಿಜಯಪುರ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿರುವ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ಜಿಲ್ಲೆಯನ್ನು 371 ಜೆ ಮೀಸಲಾತಿಯಡಿ ಸೇರಿಸುವ, ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾ ವಿದ್ಯಾಲಯ, ಸರ್ಕಾರಿ ಅಭಿಯಂತರರ ಮಹಾ ವಿದ್ಯಾಲಯ, ಸ್ಥಾಪಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಬೇಕೆಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲೆ ಕಲ್ಯಾಣದ ಚಾಲುಕ್ಯರ ಕಾಲದಿಂದ ಹೈದ್ರಾಬಾದ ನಿಜಾಮನ ಆಡಳಿತ ಸೇರಿದಂತೆ ಇಂದಿನವರೆಗೂ ಕಲ್ಯಾಣ ಕರ್ನಾಟಕದ ಭಾಗವಾಗಿಯೇ ಇದೆ. ಇದಕ್ಕೆ ಸಾಕಷ್ಟು ಐತಿಹಾಸಿಕ ದಾಖಲಿಗಳಿರುವುದು ಎಲ್ಲರಿಗೂ ತಿಳಿದ ಸಂಗತಿ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371 ಜೆ ಮೀಸಲಾತಿ ನೀಡುವಾಗ ದುರುದ್ದೇಶಪೂರಿತ ರಾಜಕೀಯಮಾಡಿ ಜಿಲ್ಲೆಯನ್ನು ಮೀಸಲಾತಿಯಿಂದ ಕೈಬಿಟ್ಟಿದ್ದಕ್ಕೆ ಕಳೆದ 11 ವರ್ಷಗಳಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಮುಖ್ಯವಾಗಿ ಜಿಲ್ಲೆಯ ಮಕ್ಕಳಿಗೆ ಸಿಗಬೇಕಾಗಿದ್ದ ಶೈಕ್ಷಣಿಕ ಮೀಸಲಾತಿ ಹಾಗೂ ಯುವ ಜನಾಂಗ ಓದ್ಯೋಗಿಕ ಮೀಸಲಾತಿಯಿಂದ ವಂಚನೆಗೊಳಗಾಗಿದ್ದಾರೆ.
ಕೂಡಲೇ ಸರ್ಕಾರ ಮತ್ತು ಜಿಲ್ಲೆಯ ಪ್ರತಿಯೊಬ್ಬ ಜನ ಪ್ರತಿನಿಧಿಗಳು ಈ ಐತಿಹಾಸಿಕ ಪ್ರಮಾದವನ್ನು ಸರಿಪಡಿಸಲು ಬಿಟ್ಟು ಹೋದ ಪ್ರದೇಶವಾದ ವಿಜಯಪುರ ಜಿಲ್ಲೆಯನ್ನು 371 ಜೆ ಮೀಸಲಾತಿಯಡಿ ಸೇರಿಸಿ ಜಿಲ್ಲೆಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯು ವೈದ್ಯಕೀಯ ಮಹಾವಿದ್ಯಾಲಯ ಮಾಡಲು ಎಲ್ಲರೀತಿಯ ಅರ್ಹತೆ ಹೊಂದಿದ್ದರೂ ಕೂಡ ಜಿಲ್ಲೆಗೆ ಸರ್ಕಾರಿ ವೈದ್ಯಕಿಯ ಮಹಾವಿದ್ಯಾಲಯ ನೀಡುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿರುವುದರಿಂದ ಜಿಲ್ಲೆಯ ಬಡ ಜನತೆಗೆ ಅನ್ಯಾಯವಾಗಿದೆ. ಕೂಡಲೇ ಸರ್ಕಾರ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಲ್ಲೆಯಲ್ಲಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪಿಸಲು ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವನ್ನು ಕೈಗೊಂಡು ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಮನವಿ ಮಾಡಿದ ಅವರು ಜಿಲ್ಲೆಗೆ 371 ಜೆ ಮೀಸಲಾತಿ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ, ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪಿಸುವ ನಿರ್ಣಯಕೈಗೊಳ್ಳುವುದಿದ್ದರೆ ಮಾತ್ರ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಮಾಡಬೇಕು. ಈ ಮೂರು ನಿರ್ಧಾರ ತೆಗೆದುಕೊಳ್ಳುವ ಇಚ್ಛಾಶಕ್ತಿ ಸರ್ಕಾರಕ್ಕೆ ಇಲ್ಲದಿದ್ದರೆ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಕಳೆದ ದಶಕದಿಂದ ನಿರಂತರವಾಗಿ ಅನ್ಯಾಯಕ್ಕೆ ಒಳಪಟ್ಟಿರುವ ಜಿಲ್ಲೆಯ ಜನ ಅನೇಕ ಸಂಘಟನೆಗಳು ಹಲವು ಬಾರಿ ಸರ್ಕಾರಕ್ಕೆ 371 ಜೆ, ಕಲ್ಯಾಣ ಕರ್ನಾಟಕ ಮೀಸಲಾತಿಯಡಿ ಸೇರಿಸುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಜಿಲ್ಲೆಯ ರಾಜಕಾರಣಿಗಳು ಕಲ್ಯಾಣ ಕರ್ನಾಟಕ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವಗೋಸ್ಕರ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕೆಂದು ಜಿಲ್ಲೆಯ ಜನರ ದಾರಿ ತಪ್ಪಿಸುತ್ತಿರುವುದು ತೀವ್ರ ಖಂಡನೀಯವಾಗಿದೆ.
ಜಿಲ್ಲೆಯ ರಾಜಕಾರಣಿಗಳು ವಿಜಯಪುರ ಜಿಲ್ಲೆ ಕಲ್ಯಾಣ ಕರ್ನಾಟಕವೋ ಅಥವಾ ಕಿತ್ತೂರ ಕರ್ನಾಟಕವೋ ಎಂದು ತಿಳಿದುಕೊಳ್ಳಬೇಕಾದರೆ ವಿಜಯಪುರ ಜಿಲ್ಲೆಯಲ್ಲಿರುವ ಸರ್ಕಾರಿ ಬಸ್ ನಿಲ್ದಾಣಗಳಿಗೆ ಹೋಗಿ ನೋಡಬೇಕು. ಅಕಸ್ಮಾತ ತಮಗೆ ಓದಲು ಬರದಿದ್ದರೆ ಬಸ್ ನಿಲ್ದಾಣದಲ್ಲಿರುವ ಜನಗಳಿಂದ ನಿಲ್ದಾಣಗಳ ನಾಮಫಲಕ ಹಾಗೂ ಸಾರಿಗೆ ಬಸ್‌ಗಳ ಮೇಲೆ ಬರೆದಿರುವ ಸಾರಿಗೆ ಸಂಸ್ಥೆಯ ಹೆಸರನ್ನು ಓದಿಸಿ ತಿಳಿದುಕೊಂಡು ವಿಜಯಪುರ ಜಿಲ್ಲೆ ಕಲ್ಯಾಣ ಕರ್ನಾಟಕವೋ.. ಕಿತ್ತೂರು ಕರ್ನಾಟಕವೋ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಕೆಂಗನಾಳ ಅವರು ಹೇಳಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 