ವಿಜಯಪುರ ಜಿಲ್ಲೆ ಸಂಪೂರ್ಣ ಬರಪೀಡಿತ ಘೋಷಣೆಗೆ ಆಗ್ರಹ: 10ನೇ ದಿನಕ್ಕೆ ಹೋರಾಟ

ವಿಜಯಪುರ ಜಿಲ್ಲೆ ಸಂಪೂರ್ಣ ಬರಪೀಡಿತ ಘೋಷಣೆಗೆ ಆಗ್ರಹ: 10ನೇ ದಿನಕ್ಕೆ ಹೋರಾಟ  Demand to declare Vijayapura district fully drought-hit: Protest enters 10th day

ವಿಜಯಪುರ 10: ಮಳೆಯ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಡೆಸುತ್ತಿರುವ ಅನಿರ್ದಿಷ್ಟ ಹೋರಾಟ 10ನೇ ದಿನಕ್ಕೆ ಕಾಲಿಟ್ಟಿದೆ.  

ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಇಂಡಿ ರೈತ ಮುಖಂಡ ಹಾಗೂ ವಕೀಲ ದತ್ತಾತ್ರೇಯ ಡೋಣಿ ಮಾತನಾಡಿ, ಜಿಲ್ಲೆಯ 13 ತಾಲೂಕುಗಳ ಪೈಕಿ ಕೆಲ ತಾಲೂಕುಗಳನ್ನು ಮಾತ್ರ ಬರಪೀಡಿತವೆಂದು ಘೋಷಿಸಿ ಉಳಿದ ತಾಲೂಕುಗಳನ್ನು ಕೈಬಿಟ್ಟಿರುವುದು ರೈತರಿಗೆ ಅನ್ಯಾಯವಾಗಿದೆ.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬರ ಪರಿಸ್ಥಿತಿ ಇರುವುದರಿಂದ ಸಂಪೂರ್ಣ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡರಾದ ಬಸವರಾಜ ಹಂಜಗಿ ಹಾಗೂ ಬಸವರಾಜ ರೆಡ್ಡಿ ಮಾತನಾಡಿ, ಜಿಲ್ಲೆಯ ಬಹುತೇಕ ರೈತರು ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದ ಬೆಳೆ ಹಾನಿಯಾಗುವ ಆತಂಕ ಎದುರಾಗಿದ್ದು, ಬರದ ಪರಿಣಾಮ ಕೃಷಿ ಮಾತ್ರವಲ್ಲದೆ ಜಾನುವಾರು ಸಾಕಣೆ, ಕುಡಿಯುವ ನೀರು ಹಾಗೂ ಗ್ರಾಮೀಣ ಜನಜೀವನದ ಮೇಲೂ ಪರಿಣಾಮ ಬೀರಿದೆ ಎಂದರು.  

ಕೂಡಲೇ ಜಿಲ್ಲೆಯ 13 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ರೈತರಿಗೆ ಸೂಕ್ತ ಬರ ಪರಿಹಾರ ನೀಡಬೇಕು. ಬೆಳೆ ವಿಮೆ ಪಾವತಿಸಿರುವ ರೈತರಿಗೆ ಮಧ್ಯಂತರ ವಿಮಾ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.  

ಹೋರಾಟಕ್ಕೆ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು. ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮಹಾದೇವ ಬನಸೋಡೆ, ರಾಮನಗೌಡ ಪಾಟೀಲ,

ಬಸವರಾಜ ರೆಡ್ಡಿ, ಮಳೆಪ್ಪ, ಈರ​‍್ಪ ಕುಳೆಕುಮಟಗಿ, ಶಿವಾನಂದಯ್ಯ ಹಿರೇಮಠ, ವಸಂತ ಭೈರಮಾಡಿ, ಅಮರೇಶ ಭೈರಗೊಂಡ, ಅಭಿಷೇಕ ಕಾಂಬಳೆ, ಮಾಳು ಪೂಜಾರಿ, ಗೇನಪ್ಪ ಬಿರಾದಾರ, ಸಿದ್ದನಗೌಡ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.