ಎಸ್‌. ಜಾನಕಿ ಅವರಿಗೆ ಮರಣೋತ್ತರ ‘ಭಾರತ ರತ್ನ’ ನೀಡುವಂತೆ ಆಗ್ರಹ

ಎಸ್‌. ಜಾನಕಿ ಅವರಿಗೆ ಮರಣೋತ್ತರ ‘ಭಾರತ ರತ್ನ’ ನೀಡುವಂತೆ ಆಗ್ರಹ  Demand to confer the ‘Bharat Ratna’ posthumously on S. Janaki

ರಾಣೆಬೆನ್ನೂರು, ಜು.17: ದಕ್ಷಿಣ ಭಾರತದ ಖ್ಯಾತ ಗಾನಕೋಗಿಲೆ ಎಸ್‌. ಜಾನಕಿ ಅವರ ನಿಧನಕ್ಕೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಬಾಪೂಜಿ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.  ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಎಸ್‌. ಜಾನಕಿ ಅವರ ಕಲಾ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ‘ನುಡಿ ನಮನ’ ಕಾರ್ಯಕ್ರಮವನ್ನು ಆಯೋಜಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.  

ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಿದ್ಯಾರ್ಥಿ ವಿಕಾಸ್ ಪರಿಷತ್ ರಾಜ್ಯಾಧ್ಯಕ್ಷ ರವೀಂದ್ರ ಗೌಡ ಪಾಟೀಲ್, “17ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಎಸ್‌. ಜಾನಕಿ ಅವರು ಭಾರತೀಯ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ದೇಶದ ಕಲಾರಂಗಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಹೇಳಿದರು.  

ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಬೇಕು, ವಿವಿಧ ರಾಜ್ಯಗಳಿಂದ ಸಂಚರಿಸುವ ರೈಲುಗಳಿಗೆ ಅವರ ಹೆಸರನ್ನು ನಾಮಕರಣ ಮಾಡಬೇಕು ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರತಿವರ್ಷ ‘ಎಸ್‌. ಜಾನಕಿ ಪ್ರಶಸ್ತಿ’ ನೀಡಬೇಕು ಎಂದು ಅವರು ಒತ್ತಾಯಿಸಿದರು.  ಇದೇ ವೇಳೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಎಸ್‌. ಜಾನಕಿ ಅವರ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಸಲ್ಲಿಸಲಾಯಿತು.  ಕಾರ್ಯಕ್ರಮದಲ್ಲಿ ನಿತ್ಯಾನಂದ ಕುಂದಾಪುರ, ಜಗದೀಶ್ ಕೇರೋಡಿ, ಪರಶುರಾಮ ಕುರುವತ್ತಿ, ಬಸಣ್ಣ ಹೊನ್ನಾಳಿ, ರಾಜು ಓಲೆಕಾರ್, ಹಾಲೇಶ್ ಬಸಾಪುರ, ವಿರೇಶ್ ಬಳ್ಳಾರಿ, ಮಂಜಣ್ಣ ಗಳಗನಾಥ, ಅಜ್ಜಪ್ಪ ನಾಯಕ, ಗೋವಿಂದಪ್ಪ ಲಮಾಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.