ಹೈದ್ರಾಬಾದ್ ವಿಮೋಚನಾ ದಿನ ಆಚರಣೆಗೆ ಆಗ್ರಹ

ಹೈದ್ರಾಬಾದ್ ವಿಮೋಚನಾ ದಿನ ಆಚರಣೆಗೆ ಆಗ್ರಹ  Demand for the observance of Hyderabad Liberation Day

ಹೈದ್ರಾಬಾದ್ ವಿಮೋಚನಾ ದಿನ ಆಚರಣೆಗೆ ಆಗ್ರಹ  

ವಿಜಯಪುರ 13: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ಕಚೇರಿ ಹಾಗೂ ಎಲ್ಲ ಘಟಕಗಳಲ್ಲಿ ಹೈದ್ರಾಬಾದ್ ವಿಮೋಚನಾ ದಿನವನ್ನು (ಕಲ್ಯಾಣ ಕರ್ನಾಟಕ ಉತ್ಸವ) ಆಚರಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅವರಿಗೆ ಸಾರಿಗೆ ಅಧಿಕಾರಿ ಮಂಜುನಾಥ ಕೋಟ್ಯಾಳ ಅವರ ಮೂಲಕ ಮನವಿ ಸಲ್ಲಿಸಲಾಯಿತು.  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಲ್ಲ ವಿಭಾಗಗಳಲ್ಲಿ ಹೈದ್ರಾಬಾದ್ ವಿಮೋಚನಾ ದಿನವನ್ನು (ಕಲ್ಯಾಣ ಕರ್ನಾಟಕ ಉತ್ಸವ) ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ವಿಜಯಪುರ ವಿಭಾಗದ ಕೇಂದ್ರ ಕಚೇರಿ ಸೇರಿದಂತೆ ಎಲ್ಲ ಘಟಕಗಳಲ್ಲಿಯೂ ಈ ಬಾರಿ ಹೈದ್ರಾಬಾದ್ ವಿಮೋಚನಾ ದಿನಾಚರಣೆ ನಡೆಸಬೇಕು ಎಂದು ಹೋರಾಟ ಸಮಿತಿ ಒತ್ತಾಯಿಸಿದೆ.  ವಿಮೋಚನಾ ಚಳುವಳಿಗೆ ನೇತೃತ್ವ ವಹಿಸಿದ ಸ್ವಾಮಿ ರಾಮಾನಂದ ತೀರ್ಥರು, ಸರ್ದಾರ ಡಾ. ಬಸವರಾಜ ನಾಗೂರು, ಸಿದ್ದಗೊಂಡಪ್ಪಗೌಡ ಪಾಟೀಲ ಸೇರಿದಂತೆ ಈ ಭಾಗದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ವಿಮೋಚನಾ ಚಳುವಳಿಯ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.  ಈ ಸಂದರ್ಭದಲ್ಲಿ ಹೋರಾಟಗಾರರಾದ ವಿನೋದ ಖೇಡ, ಲಾಯಪ್ಪ ಇಂಗಳೆ, ಅನಿಲ ಇಕ್ಕಡೆ, ಗೀರೀಶ ಕಲಘಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.