ಜನಪ್ರತಿನಿಧಿಗಳ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲೇ ಶಿಕ್ಷಣ ಪಡೆಯುವ ಕಾನೂನು ಜಾರಿಗೆ ಒತ್ತಾಯ

ಜನಪ್ರತಿನಿಧಿಗಳ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲೇ ಶಿಕ್ಷಣ ಪಡೆಯುವ  ಕಾನೂನು ಜಾರಿಗೆ ಒತ್ತಾಯ     Demand for the implementation of a law that allows children of employees of public representatives t

   ಕೊಪ್ಪಳ 22: ಕರ್ನಾಟಕದಲ್ಲಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಸಂರಕ್ಷಣೆ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲಾ ಶಿಕ್ಷಣ ಕಡ್ಡಾಯಗೊಳಿಸುವಿಕೆ ಮತ್ತು ಚುನಾವಣಾ ಅರ್ಹತೆಗೆ ಕಠಿಣ ನಿರ್ಬಂಧ ವಿಧಿಸುವ ಕಾನೂನು ಜಾರಿಗೆ ತರುವಂತೆ ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರ​‍್ಪ ಅವರಿಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರ ಮೂಲಕ ಶುಕ್ರವಾರ ಮನವಿ ಸಲ್ಲಿಸಲಾಯಿತು.   

   ಮನವಿಯಲ್ಲಿ"ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿ"ಯ ಪರವಾಗಿ ನಾಡಿನ ಬಡ, ಮಧ್ಯಮ ವರ್ಗದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸುವ ಹಿತದೃಷ್ಟಿಯಿಂದ ಈ ಕೆಳಗಿನ ಪ್ರಮುಖ ಅಂಶಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ.  ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಪ್ರಸ್ತುತ ಸ್ಥಿತಿಗತಿ: ಕಳೆದ ಕೆಲವು ವರ್ಷಗಳಲ್ಲಿ ದಾಖಲಾತಿ ಕೊರತೆ (ಶೂನ್ಯ ದಾಖಲಾತಿ) ಮತ್ತು ಸಮರ​‍್ಕ ಸೌಲಭ್ಯಗಳಿಲ್ಲದ ಕಾರಣ ರಾಜ್ಯಾದಾದ್ಯಂತ ನೂರಾರು ಸರ್ಕಾರಿ ಶಾಲೆಗಳು ಬಂದ್ ಆಗಿವೆ ಅಥವಾ ಪಕ್ಕದ ಶಾಲೆಗಳೊಂದಿಗೆ ವೀಲೀನಗೊಂಡಿವೆ. ಇತ್ತೀಚಿನ ಸರ್ಕಾರಿ ವರದಿಗಳು ಹಾಗೂ ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ನೂರಾರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮುಚ್ಚುವ ಭೀತಿಯಲ್ಲಿವೆ. ಗ್ರಾಮೀಣ ಭಾಗದ ಬಡ ಜನರಿಗೆ ಶಿಕ್ಷಣ ನೀಡುವ ಈ ದೇಗುಲಗಳು ಮುಚ್ಚುತ್ತಿರುವುದು ಅತ್ಯಂತ ಆತಂಕಕಾರಿ ವಿದ್ಯಮಾನವಾಗಿದೆ.   

    ಸರ್ಕಾರಿ ಶಾಲೆಗಳ ಉಳಿವಿಗಾಗಿ ಕ್ರಾಂತಿಕಾರಿ ಕಾನೂನಿನ ಅಗತ್ಯತೆ: ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಬೇಕಾದರೆ ವ್ಯವಸ್ಥೆಯ ಭಾಗವಾಗಿರುವವರೇ ಅದರಲ್ಲಿ ಪಾಲ್ಗೊಳ್ಳಬೇಕು. ಆದ್ದರಿಂದ, ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಬರುವಂತೆ ಸರ್ಕಾರವು ಈ ಕೆಳಗಿನ ಕಡ್ಡಾಯ ಕಾನೂನನ್ನು ರೂಪಿಸಬೇಕಾಗಿ ವಿನಂತಿ:  ಕಡ್ಡಾಯ ಶಿಕ್ಷಣ ನಿಯಮ: ಸರ್ಕಾರಿ ಶಾಲಾ ಶಿಕ್ಷಕರು, ಸರ್ಕಾರದ ಎಲ್ಲಾ ಇಲಾಖೆಗಳ (ಎ, ಬಿ, ಸಿ ಮತ್ತು ಡಿ ದರ್ಜೆಯ) ಅಧಿಕಾರಿಗಳು, ನೌಕರರು ಹಾಗೂ ಎಲ್ಲಾ ಹಂತದ (ಗ್ರಾಮ ಪಂಚಾಯತಿಯಿಂದ ಹಿಡಿದು ಸಂಸತ್ತಿನವರೆಗೆ) ಚುನಾಯಿತ ಪ್ರತಿನಿಧಿಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ’ಸರ್ಕಾರಿ ಶಾಲೆಗಳಲ್ಲೇ" ಶಿಕ್ಷಣ ಕೊಡಿಸಬೇಕು.