ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಕಠಿಣ ಕ್ರಮಕ್ಕೆ ಆಗ್ರಹ

ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಕಠಿಣ ಕ್ರಮಕ್ಕೆ ಆಗ್ರಹ  Demand for strict action in rape cases against women


ಬೆಂಗಳೂರು  23: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ದಲಿತ ಯುವತಿ ಅಶ್ವಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದು ಮೃತದೇಹವನ್ನು ಬಾವಿಗೆ ಎಸೆದಿರುವ ಘಟನೆ ಅತ್ಯಂತ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಕರ್ನಾಟಕ ಮಹಿಳಾ ವಿಭಾಗದ ಅಧ್ಯಕ್ಷೆ ಸಬೀಹಾ ಪಟೇಲ್ ಹೇಳಿದ್ದಾರೆ.  

ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ರಾಯಚೂರಿನ ಕರಡಕಲ್ ಗ್ರಾಮದಲ್ಲಿ ರಾಣೆಮ್ಮ ಮೇಲಿನ ಅತ್ಯಾಚಾರ ಮತ್ತು ಕೊಲೆ, ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲಿನ ಅತ್ಯಾಚಾರ, ಚಾಮರಾಜನಗರದಲ್ಲಿ ಬಂಗಾಳ ಮೂಲದ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಪ್ಪಳದಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಅವರು ಉಲ್ಲೇಖಿಸಿದ್ದಾರೆ.  

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 2,072 ಅತ್ಯಾಚಾರ ಮತ್ತು 18,834ಕ್ಕೂ ಹೆಚ್ಚು ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿರುವುದು ಕಳವಳಕಾರಿ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಜಾರಿಯಲ್ಲಿರುವ ಸಹಾಯವಾಣಿ, ಮಹಿಳಾ ಪೊಲೀಸ್ ತಂಡಗಳು ಹಾಗೂ ವಿಶೇಷ ವ್ಯವಸ್ಥೆಗಳು ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರ ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದರು.  

ರಾಯಚೂರು ಸೇರಿದಂತೆ ರಾಜ್ಯಾದ್ಯಂತ ನಡೆದಿರುವ ಪ್ರಕರಣಗಳ ಬಗ್ಗೆ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶೀಘ್ರವಾಗಿ ಕಾನೂನಿನ ಮುಂದೆ ತರಬೇಕು. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ, ಕಾನೂನು ನೆರವು ಮತ್ತು ಪುನರ್ವಸತಿ ಒದಗಿಸಬೇಕು.

ಮಹಿಳೆಯರ ಮೇಲಿನ ಸರಣಿ ಅತ್ಯಾಚಾರ ಮತ್ತು ಹಿಂಸಾಚಾರ ತಡೆಯಲು ರಾಜ್ಯ ಸರ್ಕಾರ ತಕ್ಷಣ ಕಠಿಣ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸಬೀಹಾ ಪಟೇಲ್ ಒತ್ತಾಯಿಸಿದ್ದಾರೆ.