ಮಕ್ಕಳ ಮೇಲೆ ದೌರ್ಜನ್ಯಗೈದು ಮಾರಣಾಂತಿಕ ಹಲ್ಲೆ ನಡೆಸಿದ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ

ಮಕ್ಕಳ ಮೇಲೆ ದೌರ್ಜನ್ಯಗೈದು ಮಾರಣಾಂತಿಕ ಹಲ್ಲೆ ನಡೆಸಿದ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ Demand for strict action against those guilty of committing atrocities and carrying out life-threate

ಲೋಕದರ್ಶನ ವರದಿ 

ವಿಜಯಪುರ 26: ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗೈದು ಮಾರಣಾಂತಿಕ ಹಲ್ಲೆ ನಡೆಸಿದ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ, ಗೃಹ ಮಂತ್ರಿ ಪ್ರಿಯಾಂಕ ಖರ್ಗೆ, ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ವಿಜಯಪುರ ಜಿಲ್ಲಾಧಿಕಾರಿಗಳು ಮುಖಾಂತರ ಅಖಿಲ ಕರ್ನಾಟಕ ವಾಲ್ಮಿಕಿ ನಾಯಕ ಮಹಾಸಭಾ ವತಿಯಿಂದ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಬಿ.ಎಸ್‌. ಗಸ್ತಿ ಮಾತನಾಡಿ, ಗುಂಡಕನಾಳ ಗ್ರಾಮದ ಸವರ್ಣಿಯರಿಂದ ತೀವ್ರವಾಗಿ ಗಾಯಗೊಂಡ 13 ಜನ ಸಂತ್ರಸ್ತರಿಗೆ ಜೀವನಾಧಾರಕ್ಕಾಗಿ ತಲಾ 25 ಲಕ್ಷ ಪರಿಹಾರ ಹಾಗೂ ತಲಾ 5 ಎಕರೆ ಜಮೀನನ್ನು ತಕ್ಷಣವೇ ಮಂಜೂರು ಮಾಡಬೇಕು. ಪುನರ್ವಸತಿ: ಗುಂಡಕನಾಳ ಗ್ರಾಮದ ವಾಲ್ಮೀಕಿ ಸಮುದಾಯದ ಅಷ್ಟೂ 80 ಕುಟುಂಬಗಳಿಗೆ ಸೂಕ್ತ ಪುನರ್ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು. ವಾಲ್ಮೀಕಿ ಸಮುದಾಯದ ನಿವಾಸಿಗಳಿಗೆ ಅನುಕೂಲವಾಗುವಂತೆ ಗ್ರಾಮದಲ್ಲೇ ಪ್ರತ್ಯೇಕ ಆಹಾರ ಧಾನ್ಯ ಪಡಿತರ ಕೇಂದ್ರವನ್ನು ತಕ್ಷಣ ಮಂಜೂರಿಸಬೇಕು.

ಸಾಮಾಜಿಕ ಸಮಾನತೆ: ದೇವಸ್ಥಾನ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಮುದಾಯದ ಜನರಿಗೆ ಮುಕ್ತ ಪ್ರವೇಶ, ಭವಿಷ್ಯದಲ್ಲಿ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಮತ್ತು ಸಮಾನ ಅವಕಾಶವನ್ನು ಖಾತರಿಪಡಿಸಬೇಕು ಎಂದರು.  ಈ ಸಂದರ್ಭ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕದ ರಾಜ್ಯಾಧ್ಯಕ್ಷರಾದ ಟಿ.ಆರ್‌. ತುಳಸಿರಾಮ ಮಾತನಾಡಿ, ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ   ವಾಲ್ಮೀಕಿ ಸಮಾಜದ ನಿವಾಸಿಗಳು, ಮಹಿಳೆಯರು ಹಾಗೂ ಮಕ್ಕಳ ಮೇಲೆ ಆಕ್ರಮ ಕೂಟ ರಚಿಸಿಕೊಂಡು ಅತ್ಯಂತ ಭೀಕರ ಹಾಗೂ ಮಾರಣಾಂತಿಕ ದಾಳಿ ನಡೆಸಿರುವುದು ಅತ್ಯಂತ ಅಮಾನವೀಯ ಮತ್ತು ಖಂಡನೀಯವಾಗಿದೆ.

ಈ ಹಿಂಸಾಚಾರದಿಂದ ಸುಮಾರು 10 ರಿಂದ 15 ಜನರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂತ್ರಸ್ತರಿಗೆ ತಕ್ಷಣವೇ ನ್ಯಾಯ ಸಿಗಬೇಕು.  ಈ ಸಂದರ್ಭ ಜಿಲ್ಲಾಧ್ಯಕ್ಷರಾದ ಸಂಜೀವಕುಮಾರ ನಾಯ್ಕೋಡಿ, ಘಟನೆಗೆ ಸಂಬಂಧಿಸಿದಂತೆ ಗುಂಡಕನಾಳ ಮತ್ತು ಅಮಲ್ಯಾಳ ಗ್ರಾಮಗಳ 01 ರಿಂದ 021 ವರೆಗೆ ಹೆಸರಿಸಲಾದ ಎಲ್ಲಾ ಆರೋಪಿಗಳನ್ನು ಹಾಗೂ ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ತಕ್ಷಣವೇ ಬಂಧಿಸಿ, ಅವರ ವಿರುದ್ಧ ಆಟ್ರಾಸಿಟಿ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ, ಕರ್ತವ್ಯ ದುರುಪಯೋಗ ಎಸಗಿರುವ ಡಿಎಸ್‌ಪಿ ನಂದರೆಡ್ಡಿ ಅವರನ್ನು ತಕ್ಷಣವೇ ಅಮಾನತುಗೊಳಿಸಿ,

ಸಂತ್ರಸ್ತರ ಮೇಲೆ ದಾಖಲಿಸಲಾಗಿರುವ ಸುಳ್ಳು ಪ್ರಕರಣಗಳನ್ನು ವಜಾಗೊಳಿಸಬೇಕು. ಗ್ರಾಮದಲ್ಲಿ ಭದ್ರತೆಗಾಗಿ ತಕ್ಷಣವೇ ಡಿಆರ್ ತುಕಡಿಯನ್ನು ನಿಯೋಜಿಸಿ, ಗಾಯಾಳುಗಳಿಗೆ ಸರ್ಕಾರದ ವತಿಯಿಂದ ಉನ್ನತ ಮಟ್ಟದ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು.  ಈ ಸಂದರ್ಭ ಅಖಿಲ ಭಾರತೀಯ ವಾಳ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಈ ಮನವಿಯ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಹೆಸರಿಸಲಾದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ.

ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಜೊತೆಗೆ ಪರಿಹಾರ ಮಂಜೂರಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸದಿದ್ದಲ್ಲಿ, ಜಿಲ್ಲಾದ್ಯಂತ ಬೃಹತ್ ಪ್ರಮಾಣದ ಉಗ್ರ ಸ್ವರೂಪದ ಹೋರಾಟ ಹಾಗೂ ತಾಳಿಕೋಟಿ ತಾಲ್ಲೂಕ ಬಂದ ಹಮ್ಮಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಅರ್ಜುನ ನಾಯ್ಕೋಡಿ, ನಾಗಪ್ಪ ನಾಯ್ಕೋಡಿ, ನಿಂಗಪ್ಪ ನಾಟೀಕಾರ, ಶಿವರಾಜ ನಾಯ್ಕೋಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.