ರೈತರ ಜೋಳ ಖರೀದಿ ಬಾಕಿ ಹಣ ಬಿಡುಗಡೆಗೆ ಆಗ್ರಹ

ರೈತರ ಜೋಳ ಖರೀದಿ ಬಾಕಿ ಹಣ ಬಿಡುಗಡೆಗೆ ಆಗ್ರಹ  Demand for release of outstanding payments for farmers' maize procurement

ಲೋಕದರ್ಶನ ವರದಿ 

ಕಂಪ್ಲಿ, ಜು.6: ರಾಜ್ಯದ ವಿವಿಧ ಭಾಗಗಳ ರೈತರಿಂದ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಖರೀದಿಸಿದ ಜೋಳದ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೋಮವಾರ ಮನವಿ ಸಲ್ಲಿಸಿದರು.  

ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಂತೆ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಜೋಳ ಖರೀದಿಯಾಗಿ ನಾಲ್ಕು ತಿಂಗಳು ಕಳೆದರೂ ಬಹುತೇಕ ರೈತರಿಗೆ ಹಣ ಪಾವತಿಯಾಗಿಲ್ಲ ಎಂದು ದೂರಲಾಗಿದೆ.  

ಈ ಕುರಿತು ಮಾತನಾಡಿದ ಬಿ.ವಿ. ಗೌಡ, ಕೆಲವೇ ರೈತರಿಗೆ ಪಾವತಿ ಆಗಿದ್ದು, ಸುಮಾರು ಶೇ.75ರಷ್ಟು ರೈತರು ಇನ್ನೂ ಹಣಕ್ಕಾಗಿ ಕಾಯುತ್ತಿದ್ದಾರೆ. ಜನವರಿಯಲ್ಲಿ ಜೋಳವನ್ನು ಸರ್ಕಾರಕ್ಕೆ ಮಾರಾಟ ಮಾಡಿದ ರೈತರು ಅನೇಕ ಬಾರಿ ಹೋರಾಟ ನಡೆಸಿದರೂ ಬಾಕಿ ಹಣ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.  

ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರು, ಈ ವರ್ಷವೂ ಸಾಲ ಮಾಡಿ ಬೆಳೆ ಬೆಳೆದಿದ್ದರೂ ಸಮರ​‍್ಕ ಮಳೆಯ ಕೊರತೆಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರಿಗೆ ನೀಡಬೇಕಿರುವ ಜೋಳ ಖರೀದಿ ಬಾಕಿ ಹಣವನ್ನು ಕೂಡಲೇ ಅವರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಅವರು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋದಿಹಾಳ್, ಮಲ್ಲಣ್ಣಗೌಡ ಪಾಟೀಲ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.