ಆಶಾ ಕಾರ್ಯಕರ್ತೆಯರಿಗೆ 10ಸಾವಿರ ಮಾಸಿಕ ಗೌರವಧನ ನೀಡಲು ಆಗ್ರಹ

ಆಶಾ ಕಾರ್ಯಕರ್ತೆಯರಿಗೆ  10ಸಾವಿರ ಮಾಸಿಕ ಗೌರವಧನ ನೀಡಲು ಆಗ್ರಹ Demand for monthly honorarium of Rs 10,000 for ASHA workers

ಕಾರವಾರ, 28 : ಆಶಾ ಕಾರ್ಯಕರ್ತೆಯರಿಗೆ  ಹತ್ತು  ಸಾವಿರ ನಿಗದಿತ ಮಾಸಿಕ ಗೌರವಧನ ನೀಡಲು  ಎಐಯುಟಿಯುಸಿ  ಆಗ್ರಹಿಸಿತು.  ಎಐಯುಟಿಯುಸಿ  ನೇತೃತ್ವದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಕುಮಟಾ ತಾಲ್ಲೂಕು ಆಶಾ ಕಾರ್ಯಕರ್ತೆಯರ ಸಮಾವೇಶ ಪಟ್ಟಣದ ಮಣಕಿ  ಮೈದಾನದಲ್ಲಿ ಶನಿವಾರ ನಡೆಯಿತು. ಸಮಾವೇಶ ಉದ್ದೇಶಿಸಿ ಮಾತನಾಡಿದ  ಸಂಘದ ರಾಜ್ಯ ಉಪಾಧ್ಯಕ್ಷ  ಗಂಗಾಧರ ಬಡಿಗೇರ, ಕಳೆದ ಜನವರಿಯಲ್ಲಿ ರಾಜ್ಯಮಟ್ಟದ ಹೋರಾಟ ಬೆಂಗಳೂರಿನಲ್ಲಿ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಏಪ್ರಿಲ್ ನಿಂದ ಪ್ರತಿಯೊಬ್ಬರಿಗೂ ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಮತ್ತು ರಾಜ್ಯದ ಗೌರವಧವನ್ನು ಕ್ರೋಢೀಕರಿಸಿ ಕನಿಷ್ಠ ರೂ.10,000 ಗೌರವಧನ ಗ್ಯಾರಂಟಿ ಮಾಡುತ್ತೇವೆ ಎಂದಿದ್ದರು.  

ಬಜೆಟ್‌ನಲ್ಲಿ ಸಹ  ಗೌರವಧನ  ಹೆಚ್ಚಳ ಘೋಷಿಸುತ್ತೇವೆ ಎಂದು ಮಾತು ಕೊಟ್ಟಿದ್ದರು. ಆದರೆ ಈ ವರೆಗೂ ಆಶಾ ಕಾರ್ಯಕರ್ತೆಯರ  ಬೇಡಿಕೆಗಳನ್ನು ಈಡೇರಿಸಿಲ್ಲ. ಬದಲಾಗಿ ಆಶಾ ಕಾರ್ಯಕರ್ತೆಯ ಮೇಲೆ ಅವೈಜ್ಞಾನಿಕ ಮೌಲ್ಯಮಾಪನ, ಅಪ್ರೈಸಲ್ ಇನ್ನೂ ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕರೋನಾ ಸಮಯದಲ್ಲಿ ಜೀವವನ್ನು ಪಣಕ್ಕಿಟ್ಟು ವಿಶ್ವಸಂಸ್ಥೆಯು ಜಾಗತಿಕ ಆರೋಗ್ಯ ರೂವಾರಿಗಳೆಂದು ಹೊಗಳಿದ್ದ ಆಶಾ ಕಾರ್ಯಕರ್ತೆರನ್ನು ಮತ್ತಷ್ಟು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.  ಆಶಾ ಕಾರ್ಯಕರ್ತೆಯರ ಬೇಡಿಕೆ ಮುಂದಿಟ್ಟು   ಮುಂಬರುವ ದಿನಗಳಲ್ಲಿ ತೀವ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು. ಅಲ್ಲದೇ ಇತರೆ ಕಾಂಪೋನೆಂಟ್ ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು ಎಂದರು.ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ. 10,000 ಗ್ಯಾರಂಟಿಯಾಗಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ  ಹೇಳಿತ್ತು. ಆದರೆ  ಈವರೆಗೂ ಯಾವುದೇ ಆದೇಶವನ್ನು ಈ ಬಗ್ಗೆ ಹೊರಡಿಸಿರುವುದಿಲ್ಲ.ಆದ್ದರಿಂದ ಸರ್ಕಾರ ಕೂಡಲೇ ಈ ಕುರಿತು ಆದೇಶಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. 

ಕುಮಟಾ ತಾಲೂಕು ಅಧ್ಯಕ್ಷೆ ಆಶಾ ನಾಗೇಕರ, ಮಾತಾಡಿ , ಈ ವರ್ಷದ ಬಜೆಟ್‌ನಲ್ಲಿ ಎಲ್ಲಾ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾಗಳಿಗೂ ರೂ.1000 ಹೆಚ್ಚಳ ಮಾಡಲಾಗುವುದು, ಎಂದು ಭರವಸೆ ನೀಡಲಾಗಿತ್ತು. ಆದರೆ ಈ ಬಜೆಟ್‌ನಲ್ಲಿ ರಾಜ್ಯದ ಎಲ್ಲ ಆಶಾಗಳಿಗೆ ರೂ.1000 ಹೆಚ್ಚಳ ಮಾಡದೆ, 42000 ಆಶಾಗಳಲ್ಲಿ ಈಗಾಗಲೇ ಸುಮಾರು 27000 ಆಶಾಗಳಿಗೆ ತಂಡ ಆಧಾರಿತ (ಟೀಮ್ ಬೇಸ್ಡ್‌ ಇನ್‌ಸೆಂಟಿವ್) ರೂ.1000 ಪ್ರೋತ್ಸಾಹಧನ ನೀಡಲಾಗಿದೆ.  ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ರೂ.1000 ಹೆಚ್ಚಳ ಮಾಡಬೇಕಾಗಿದೆ ಎಂದರು. ಈ ಸಭೆಯಲ್ಲಿ ಕುಮಟಾ ತಾಲೂಕಿನ ಕೋಡ್ಕಣಿ, ಕಾಗಲ, ಗೋಕರ್ಣ, ಸಂತೆಗುಳಿ ಹಿರೇಗುತ್ತಿ, ಕತಗಾಲ ಮತ್ತು ಬಂಕಿ ಕೊಡ್ಲ ಸೇರಿದಂತೆ ಎಲ್ಲ ಪಿಎಚ್ ಸಿ ಗಳ ಆಶಾ ಕಾರ್ಯಕರ್ತೆಯರು ಸೇರಿದ್ದರು.ಹೊಸ ಸಮಿತಿಯ ಆಯ್ಕೆ: 

ಇದೇ ವೇಳೆ  ಕುಮಟಾ ತಾಲ್ಲೂಕು ಸಮಿತಿ ಯನ್ನು ರಚಿಸಲಾಯಿತು. ಕುಮಟಾ ತಾಲೂಕು ಅಧ್ಯಕ್ಷರಾಗಿ ಆಶಾ ನಾಗೇಕರ, ಉಪಾಧ್ಯಕ್ಷರುಗಳಾಗಿ ಜೋಸ್ ಪಿನ್ ಫರ್ನಾಂಡಿಸ್ ನಂದಿನಿ ನಾಯ್ಕ್‌, ಭಾರತಿ ಹಳ್ಳೇರ್, ಕಾರ್ಯದರ್ಶಿಯಾಗಿ ಲಕ್ಷ್ಮಿ ನಾಯ್ಕ್‌, ಜಂಟಿ ಕಾರ್ಯದರ್ಶಿಗಳಾಗಿ ಜಾನಕಿ ಗೌಡ,ರೇವತಿ ಮುಕ್ರಿ, ಸದಸ್ಯರುಗಳಾಗಿ ನೀತಾ ಭಂಡಾರಿ, ದೇವಿ ಪಟ್ಗಾರ್ ಗಣಪಿ ಆರೇರ್, ಶೋಭಾ ಗೌಡ ಮತ್ತು ವಿಜಯಲಕ್ಷ್ಮಿ ಆಯ್ಕೆಯಾದರು ಎಂದು  ಸಂಘದ ರಾಜ್ಯ ಉಪಾಧ್ಯಕ್ಷ  ಗಂಗಾಧರ ಬಡಿಗೇರ ತಿಳಿಸಿದ್ದಾರೆ .....