ತಾಳಿಕೋಟೆ ನಗರಕ್ಕೆ ಎಲ್ಪಿಜಿ ಗ್ಯಾಸ್ ಏಜೆನ್ಸಿ ನೀಡಲು ಆಗ್ರಹ

ತಾಳಿಕೋಟೆ ನಗರಕ್ಕೆ ಎಲ್ಪಿಜಿ ಗ್ಯಾಸ್ ಏಜೆನ್ಸಿ ನೀಡಲು ಆಗ್ರಹ  Demand for an LPG gas agency for Talikote town


ತಾಳಿಕೋಟೆ 28: ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಪಿಜಿ ಸಿಲಿಂಡರ್ ಗ್ಯಾಸ್ ಏಜೆನ್ಸಿಯನ್ನು ಗ್ರಾಮೀಣ ಭಾಗದ ಗ್ರಾಹಕರಿಗೆ ನೀಡಿರುವುದರಿಂದ ನಗರ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಸಮಸ್ಯೆ ನಿವಾರಿಸಲು ಗ್ಯಾಸ್ ಏಜೆನ್ಸಿಯನ್ನು ಸ್ಥಳೀಯರಿಗೆ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣದ ನಾಗರಿಕರು ಗುರುವಾರ ತಹಶೀಲ್ದಾರ್ ಮಲ್ಲಿಕಾರ್ಜುನ ಅರಕೇರಿ ಅವರಿಗೆ ಮನವಿ ಸಲ್ಲಿಸಿದರು.  

ಮನವಿಯಲ್ಲಿ, ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ತಾಳಿಕೋಟೆ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ಪಟ್ಟಣದಲ್ಲಿ ಎಲ್ಪಿಜಿ ಸಿಲಿಂಡರ್ ಬಳಕೆದಾರರ ಸಂಖ್ಯೆ ಹೆಚ್ಚಿನದಾಗಿದೆ. ಈ ಹಿಂದೆ ಪಟ್ಟಣದಲ್ಲೇ ವಿತರಕರು ಇದ್ದ ಕಾರಣ ಗ್ರಾಹಕರಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆದರೆ, ಇದೀಗ ಏಜೆನ್ಸಿಯನ್ನು ತಾಲ್ಲೂಕಿನ ಕಲಕೇರಿ ಗ್ರಾಮದವರಿಗೆ ನೀಡಿರುವುದರಿಂದ ಪಟ್ಟಣಕ್ಕೆ ಸಿಲಿಂಡರ್ ಪೂರೈಕೆ ಸಮರ​‍್ಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ ಎಂದು ದೂರಿದರು.  

ಪಟ್ಟಣ ನಿವಾಸಿಗಳಿಗೆ ಸಾಮಾನ್ಯವಾಗಿ 25 ದಿನಗಳೊಳಗೆ ಸಿಲಿಂಡರ್ ಪೂರೈಕೆಯಾಗಬೇಕಿದ್ದು, ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಪೂರೈಕೆ ಮಾಡುವ ರೀತಿಯಲ್ಲಿ 45 ದಿನಗಳ ಬಳಿಕ ಸಿಲಿಂಡರ್ ನೀಡಲಾಗುತ್ತಿದೆ. ಇದರಿಂದ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.