ಸವಣೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ

ಸವಣೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ  Demand for a separate Savanur Assembly constituency


ಸವಣೂರು   29: ಸವಣೂರು ತಾಲ್ಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡುವಂತೆ ಆಗ್ರಹಿಸಿ ಸವಣೂರು ತಾಲ್ಲೂಕು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ ಹಾಗೂ ತಾಲ್ಲೂಕಿನ ಮಹಾಜನತೆಯ ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಲಾಯಿತು. ಬಳಿಕ ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.  

 ಪಟ್ಟಣದ ದೊಡ್ಡ ಹುಣಸೆ ಕಲ್ಮಠದಿಂದ ಆರಂಭವಾದ ಮೆರವಣಿಗೆ ವಿ.ಕೃ. ಗೋಕಾಕ್ ವೃತ್ತ, ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತ, ಸಿಂಪಿಗಲ್ಲಿ, ಮುಖ್ಯ ಮಾರುಕಟ್ಟೆ ಹಾಗೂ ಅಂಚೆ ಕಚೇರಿ ಮಾರ್ಗವಾಗಿ ಸಾಗಿ ತಹಸೀಲ್ದಾರ್ ಕಚೇರಿ ತಲುಪಿತು. ಅಲ್ಲಿ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿದರು.  

 ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಿರಹಟ್ಟಿಯ ಫಕ್ಕೀರದಿಂಗಾಲೇಶ್ವರ ಸ್ವಾಮೀಜಿ, ಸವಣೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಬೇಡಿಕೆಯನ್ನು ಹಲವು ವರ್ಷಗಳ ಹಿಂದೆಯೇ ಈಡೇರಿಸಬೇಕಾಗಿತ್ತು. ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸ್ಥಳೀಯ ಜನತೆಗೆ ಅನ್ಯಾಯವಾಗಿದೆ. ಇದು ಜನರ ಹಕ್ಕಾಗಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.  

 “ನಾವು ಯಾವುದೇ ರೀತಿಯ ಪ್ರತ್ಯೇಕತೆಯ ಘೋಷಣೆ ಕೂಗುತ್ತಿಲ್ಲ. ನ್ಯಾಯಸಮ್ಮತವಾಗಿ ದೊರೆಯಬೇಕಾದ ಸವಣೂರು ವಿಧಾನಸಭಾ ಕ್ಷೇತ್ರವನ್ನು ಪ್ರತ್ಯೇಕಗೊಳಿಸಿ, ಈ ಭಾಗವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮ ಗುರಿ,” ಎಂದು ಅವರು ತಿಳಿಸಿದರು. ಸಲ್ಲಿಸಿರುವ ಮನವಿಯನ್ನು ಸರ್ಕಾರಕ್ಕೆ ತಲುಪಿಸುವಂತೆ ಉಪವಿಭಾಗಾಧಿಕಾರಿಗಳನ್ನು ಒತ್ತಾಯಿಸಿದರು.  

 ಸಮಿತಿಯ ಅಧ್ಯಕ್ಷ ಎಸ್‌.ವಿ. ಪಾಟೀಲ ಮಾತನಾಡಿ, ಸವಣೂರು ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಸುಮಾರು 65 ಗ್ರಾಮಗಳಿದ್ದು, 1.80 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದೆ. ಹೀಗಾಗಿ ಸವಣೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಲು ಅಗತ್ಯವಾದ ಜನಸಂಖ್ಯಾ ಆಧಾರವಿದೆ. ಕ್ಷೇತ್ರ ಪ್ರತ್ಯೇಕಗೊಂಡರೆ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.  

 ಸಮಿತಿಯ ಗೌರವಾಧ್ಯಕ್ಷ ಚನ್ನಬಸವ ಮಹಾಸ್ವಾಮೀಜಿ ಹಾಗೂ ಹತ್ತಿಮತ್ತೂರಿನ ನಿಜಗುಣ ಶಿವಯೋಗಿ ಸ್ವಾಮೀಜಿ ಮಾತನಾಡಿ, ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ಹೋರಾಟ ನಡೆಸಲಾಗುತ್ತಿದೆ. ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವಂತೆ ಕರೆ ನೀಡಿದರು.  

 ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಸಿ. ಹಿರೇಮಠ, ಉಪಾಧ್ಯಕ್ಷ ಧರಿಯಪ್ಪಗೌಡ ಪಾಟೀಲ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಧರ್ಮಗುರುಗಳು, ಮಠಾಧೀಶರು, ವರ್ತಕರು, ರೈತರು, ದಲಿತಪರ, ಕನ್ನಡಪರ ಹಾಗೂ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.