ಬೆಂಗಳೂರು, ಏ. 10, ಅಗತ್ಯ ವಸ್ತುಗಳನ್ನು ಜನರು ಮನೆ ಬಾಗಿಲಲ್ಲೇ ಖರೀದಿಸಲು ಅನುಕೂಲವಾಗುವಂತೆ ಬೀದಿ ಬೀದಿಗೂ ತಲುಪಿಸುವ ವ್ಯವಸ್ಥೆಯಾಗಬೇಕು. ಇಲ್ಲದಿದ್ದರೆ ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚು ಸೇರುವುದರಿಂದ ಜನ ಸಂದಣಿ ಉಂಟಾಗುತ್ತದೆ. ಸಾಮಾಜಿಕ ಅಂತರವನ್ನು ಎಲ್ಲಾ ಕಡೆಗಳಲ್ಲಿ ಚಾಚೂ ತಪ್ಪದೆ ಪಾಲಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ತಿಳಿಸಿದ್ದಾರೆ. ಆರ್ಥಿಕ ಬಿಕ್ಕಟ್ಟು ಹಾಗೂ ಕೊವಿಡ್-19 ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಶಾಸಕರ ಶೇ. 30ರಷ್ಟು ವೇತನ ಹಾಗೂ ಭತ್ಯೆ ಕಡಿತ ಮಾಡುವ ತೀರ್ಮಾನವನ್ನು ಸ್ವಾಗತಿಸಲಾಗುವುದು. ನಮ್ಮ ಪಕ್ಷದ ಶಾಸಕರು, ಸಂಸದರು ಸರ್ಕಾರದ ತೀರ್ಮಾನಕ್ಕೆ ಬದ್ಧವಾಗಿದ್ದೇವೆ. ನಾವೇ ತೀರ್ಮಾನ ಮಾಡಿ ಸರ್ಕಾರಕ್ಕೆ ನೀಡಬೇಕೆಂದು ಇದ್ದೆವು. ಅಷ್ಟರಲ್ಲಿ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಆದರೆ, ಹಣ ಸರಿಯಾದ ರೀತಿ ಬಳಕೆಯಾಗಬೇಕು ಎಂಬುದು ನಮ್ಮ ಆಗ್ರಹ. ನಗರ ಪ್ರದೇಶದ ಕೊಳಗೇರಿ ನಿವಾಸಿಗಳಿಗೆ ಹಾಗೂ ಬಡವರಿಗೆ ಅರ್ಧ ಲೀಟರ್ ಹಾಲನ್ನು ಉಚಿತವಾಗಿ ನೀಡಲಾಗುತ್ತಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಿ ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡಬೇಕು. ದಿನಬಿಟ್ಟು ದಿನವಾದರೂ ಅರ್ಧ ಲೀಟರ್ ಹಾಲನ್ನು ಗ್ರಾಮೀಣ ಭಾಗದ ಬಡವರಿಗೂ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕೊವಿಡ್ ಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ರೋಗಗಳಿಗೆ ಚಿಕಿತ್ಸೆ ಇಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಸಾಮಾನ್ಯ ರೋಗಗಳಿಗೂ ಚಿಕಿತ್ಸೆ ಪಡೆಯಲು ಎಲ್ಲಾ ಖಾಸಗಿ ಕ್ಲಿನಿಕ್ ಗಳನ್ನು ಕಡ್ಡಾಯವಾಗಿ ತೆರೆಯುವಂತೆ ಮಾಡಬೇಕು. ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಮಾಂಸದಂಗಡಿ ತೆರೆಯಲು ಅವಕಾಶ ನೀಡದಿದ್ದರೆ ಒಳ್ಳೆಯದಾಗಿತ್ತು. ಈ ವಿಚಾರದಲ್ಲಿ ಸರ್ಕಾರ ಪರಿಶೀಲನೆ ಮಾಡಬೇಕು. ಕೆಲವು ದಿನಗಳ ಕಾಲ ಸಸ್ಯಾಹಾರ ಸೇವಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ ಹೇಳಿದರು. ಬಿಜೆಪಿಯ ಕೆಲವರು ತಮ್ಮ ಲೇಬಲ್ ಹಾಕಿದ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಇದು ಅವರ ವೈಯಕ್ತಿಕ ಹಣವಾಗಿದ್ದರೆ ನಮ್ಮ ತಕರಾರಿಲ್ಲ. ಆದರೆ ಸರ್ಕಾರದ ವೆಚ್ಚದಲ್ಲಿ ಮಾಡುತ್ತಿದ್ದರೆ ಅದು ಸರಿಯಲ್ಲ ಎಂದು ಹೇಳಿದರು.