ದೆಹಲಿ ಹಿಂಸಾಚಾರ : ರಾಷ್ಟ್ರಪತಿಗೆ ‘ಮಾಯಾ’ ಪತ್ರ

ನವದೆಹಲಿ, ಫೆ 28:   ದೆಹಲಿ ಹಿಂಸಾಚಾರದ ತನಿಖೆಯನ್ನು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕೆಂದು ಕೋರಿ ಬಹುಜನ ಸಮಾಜ ಪಕ್ಷ ಬಿಎಸ್‍ ಪಿ ಮುಖ್ಯಸ್ಥೆ ಮಾಯಾವತಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.  

ರಾಷ್ಟ್ರ ರಾಜಧಾನಿಯಲ್ಲಿ 1984ರಲ್ಲಿ ನಡೆದಂತೆ ಮತ್ತೊಮ್ಮೆ ಗಲಭೆಗಳಿಂದ ನಲುಗುತ್ತಿದೆ.  ಹೆಚ್ಚಿನ ಮಟ್ಟದಲ್ಲಿ ಜೀವನಾಶ, ಆಸ್ತಿಪಾಸ್ತಿ ನಷ್ಟವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ ಕುಗ್ಗುತ್ತಿದೆ ಎಂದು ಮಾಯಾವತಿ ಪತ್ರದಲ್ಲಿ ವಿವರಿಸಿದ್ದಾರೆ.  

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ.  ಹೀಗಾಗಿ ಹಿಂಸಾಚಾರ ಪ್ರಕರಣದ ತನಿಖೆಯು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.  

ಅಂತೆಯೇ ದೆಹಲಿ ಹಿಂಸಾಚಾರದ ಸಂತ್ರಸ್ತರರಿಗೆ ಕೇಂದ್ರ ಹಾಗೂ ದೆಹಲಿ ಸರ್ಕಾರಗಳು ಪರಿಹಾರ ನೀಡುವಂತೆಯೂ ಸೂಚಿಸಬೇಕೆಂದು ಮಾಯಾವತಿಯವರು ರಾಷ್ಟ್ರಪತಿಯವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.