ನವದೆಹಲಿ,ಫೆ.26 : ರಾಜಧಾನಿ ದೆಹಲಿಯಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲೇ ಕಂಡು , ಕೇಳರಿಯದ ಹಿಂಸಾಚಾರ ಸಂಭವಿಸಿದ್ದು, ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ದೆಹಲಿಯಲ್ಲಿಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಈ ಒತ್ತಾಯ ಮಾಡಲಾಗಿದೆ.
ರಾಜಧಾನಿಯಲ್ಲಿ ಹಿಂಸಾಚಾರದ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ಮತ್ತು ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಗಧಾ ಪ್ರಹಾರ ಮಾಡಿದ್ದಾರೆ.
ಮಂಗಳವಾರ ಅದೂ ಅಮೆರಿಕ ರಿಕಾ ಅಧ್ಯಕ್ಷರು ರಾಜಧಾನಿ ಯಲ್ಲಿ ಇದ್ದಾಗಲೇ ಹಿಂಸಾಚಾರ ಕಂಡೂ ಕೇಳರಿಯದಂತೆ ಭುಗಿಲೆದ್ದಿದ್ದು, 20ಕ್ಕೂ ಹೆಚ್ಚು ಅಮಾಯಕರು ಜೀವ ಕಳೆದುಕೊಂಡಿದ್ದಾರೆ.
ಈ ಘಟನೆಗೆ ಪರೋಕ್ಷವಾಗಿ ದೆಹಲಿ ಸರ್ಕಾರ ಕೂಡ ಕಾರಣವಾಗಿದೆ. ಇದರ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೊರಬೇಕೆಂದು ಕಾಂಗ್ರೆಸ್ ನಾಯಕರು ಚಾಟಿ ಬೀಸಿದ್ದಾರೆ.
ಇಂದಿನ ಕಾರ್ಯಕಾರಿಣಿ ಸಭೆಯಲ್ಲಿಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ , ಹಿರಿಯ ನಾಯಕ ಎಕೆ ಆಂಟನಿ, ಗುಲಾಂ ನಭಿಯಾಜಾರ್ , ಪ್ರಿಯಾಂಕಾ ಗಾಂಧಿ, ಜ್ಯೋತಿರಾದಿತ್ಯ ಸಿಂಧ್ಯ, ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮೊದಲಾದ ನಾಯಕರು ಭಾಗವಹಿಸಿದ್ದರು.
ಈ ನಡುವೆ ದೆಹಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.