ವಾಷಿಂಗ್ಟನ್, ಫೆ 27; ದೆಹಲಿಯಲ್ಲಿ ನಡೆದ ಹಿಂಸಾಚಾರಗಳ ಬಗ್ಗೆ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ(ಯುಎಸ್ ಸಿಐಆರ್ ಎಫ್) ತೀವ್ರ ಕಳವಳ ವ್ಯಕ್ತಪಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ನಡುವೆಯೇ ಈಶಾನ್ಯ ದೆಹಲಿಯಲ್ಲಿ ಮಾರಕ ಗಲಭೆಗಳು ಮತ್ತು ಹಿಂಸಾಚಾರಗಳು ನಡೆದಿವೆ. ಈವರೆಗೆ, ಹಿಂಸಾಚಾರದಲ್ಲಿ 27 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ವರದಿಗಳಂತೆ ಅನೇಕ ಪ್ರಾರ್ಥನಾ ಸ್ಥಳಗಳು ಮತ್ತು ಮಂದಿರಗಳನ್ನೂ ಧ್ವಂಸಗೊಳಿಸಲಾಗಿದೆ. 2019 ರ ಡಿಸೆಂಬರ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಉಂಟಾಗಿದೆ.
‘ದೆಹಲಿಯಾದ್ಯಂತ ಹೆಚ್ಚುತ್ತಿರುವ ಹಿಂಸಾಚಾರ ಮುಂದುವರಿಯಬಾರದು.’ ಎಂದು ಯುಎಸ್ ಸಿಐಆರ್ ಎಫ್ ಆಯುಕ್ತರಾದ ಅನುರಿಮಾ ಭಾರ್ಗವ ಹೇಳಿದ್ದಾರೆ.
‘ಭಾರತ ಸರ್ಕಾರ ತನ್ನ ಎಲ್ಲ ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ತ್ವರಿತ ಕ್ರಮ ತೆಗೆದುಕೊಳ್ಳಬೇಕು.’ ಎಂದು ಅವರು ಹೇಳಿದ್ದಾರೆ.
2019 ರ ವಾರ್ಷಿಕ ವರದಿಯಲ್ಲಿ ಯುಎಸ್ ಸಿಐಆರ್ ಎಫ್ ಭಾರತವನ್ನು ಎರಡನೇ ಸ್ತರದ ದೇಶವೆಂದು ವರ್ಗೀಕರಿಸಿದೆ. ಅಂತಾರಾಷ್ಟ್ರೀಯ ಧಾರ್ಮಿಕ ಕಾಯ್ದೆಯಡಿ ನಿರ್ದಿಷ್ಟ ದೇಶವೊಂದರಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗಳ ಅಂಶಗಳನ್ನು ವರದಿ ಪರಿಗಣಿಸಿದೆ.