ಕಾಯಕ ನಿಷ್ಠೆ ಹಾಗೂ ‘ದುಡಿಮೆಯೇ ದೇವರು’ ಸಂದೇಶ ಇಂದಿಗೂ ಪ್ರಸ್ತುತ: ಜಿಲ್ಲಾಧಿಕಾರಿ ಶ್ರೀಧರ್

ಕಾಯಕ ನಿಷ್ಠೆ ಹಾಗೂ ‘ದುಡಿಮೆಯೇ ದೇವರು’ ಸಂದೇಶ ಇಂದಿಗೂ ಪ್ರಸ್ತುತ: ಜಿಲ್ಲಾಧಿಕಾರಿ ಶ್ರೀಧರ್  Dedication to work and the message that ‘work is worship’ remain relevant today: Deputy Commissioner

ಗದಗ, ಆಗಸ್ಟ್‌ 28: 12ನೇ ಶತಮಾನದ ಶಿವಶರಣ ನುಲಿಯ ಚಂದಯ್ಯನವರ ಕಾಯಕ ನಿಷ್ಠೆ ಹಾಗೂ ‘ದುಡಿಮೆಯೇ ದೇವರು’ ಎಂಬ ಸಂದೇಶ ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಅತ್ಯಂತ ಪ್ರಸ್ತುತವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಬಸವಣ್ಣನವರ ಸಮಕಾಲೀನರಾಗಿದ್ದ ನುಲಿಯ ಚಂದಯ್ಯ ಅವರು ಕಾಯಕದ ಮೂಲಕ ಜೀವನ ನಡೆಸಿ, ತಾವು ದುಡಿದು ಗಳಿಸಿದ ಸಂಪಾದನೆಯಲ್ಲಿಯೇ ಇತರರಿಗೆ ದಾಸೋಹ ಮಾಡುತ್ತಿದ್ದರು. ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಅವರು, ಕಾಯಕಕ್ಕೆ ಗೌರವ, ಸ್ವಾವಲಂಬನೆ ಹಾಗೂ ಪ್ರಾಮಾಣಿಕ ದುಡಿಮೆಯ ಮಹತ್ವವನ್ನು ಸಾರಿದ ಮಹಾನ್ ಶರಣರಾಗಿದ್ದರು ಎಂದರು.  

ನುಲಿಯ ಚಂದಯ್ಯನವರ ಜೀವನ ಹಾಗೂ ವಿಚಾರಧಾರೆ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ಯುವಜನತೆ ಅವರ ಜೀವನಾದರ್ಶಗಳನ್ನು ಅರಿತು ಅಳವಡಿಸಿಕೊಳ್ಳಬೇಕು. ಕಾಯಕಕ್ಕೆ ಗೌರವ ನೀಡುವುದು, ಸ್ವಾವಲಂಬನೆಯಿಂದ ಬದುಕುವುದು, ಪ್ರಾಮಾಣಿಕವಾಗಿ ದುಡಿಯುವುದು ಹಾಗೂ ಸಮಾಜದ ಒಳಿತಿಗಾಗಿ ತಮ್ಮದೇ ಆದ ಕೊಡುಗೆ ನೀಡುವುದು ಅವರ ಬದುಕಿನ ಪ್ರಮುಖ ಸಂದೇಶಗಳಾಗಿವೆ ಎಂದು ತಿಳಿಸಿದರು.