ಬೆಂಗಳೂರು, ಜ 30: ಈಗಾಗಲೇ ಬೆಂಬಲ ಬೆಲೆ ಘೋಷಿಸಿರುವ ಬೆಳೆಗಳ ಜೊತೆಗೆ ಕಡಲೆ, ಗೋಧಿ, ಸೂರ್ಯಕಾಂತಿ, ಹೆಸರು, ಜೋಳ, ಹತ್ತಿ, ಕುಸುಬೆ ಮುಂತಾದ ಬೆಳೆಗಳಿಗೂ ಬೆಂಬಲ ಬೆಲೆ ಯೋಜನೆ ವಿಸ್ತರಿಸಬೇಕೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಜತೆಗೆ ತುರ್ತಾಗಿ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದಿರುವ ಸಿದ್ದರಾಮಯ್ಯ, ಕಳೆದ ವರ್ಷ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ರಾಜ್ಯದ 22ಕ್ಕೂ ಹೆಚ್ಚಿನ ಜಿಲ್ಲೆಗಳ ಜನರ ಬದುಕು ಛಿದ್ರಗೊಂಡಿದೆ. ಮುಂಗಾರು ಬೆಳೆ ಹಾಳಾಗಿದ್ದು, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ರೈತರು ಕಷ್ಟಪಟ್ಟು ಬೆಳೆದ ಫಸಲಿಗೆ ಬೆಲೆಯಿಲ್ಲದಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಕುಸಿದ ಆರ್ಥಿಕ ಪರಿಸ್ಥಿತಿ ಜನರ ಬದುಕನ್ನು ಕಸಿದುಕೊಂಡಿದೆ ಎಂದಿದ್ದಾರೆ.
ಬಿತ್ತನೆ ಬೀಜ, ರಸಗೊಬ್ಬರ, ಔಷಧಿ ಕಂಪೆನಿಗಳು, ದಲ್ಲಾಳಿಗಳು, ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಹುನ್ನಾರಗಳು ಮತ್ತು ಆಡಳಿತ ಶಾಹಿ ನಿರ್ಲಕ್ಷ್ಯದಿಂದ ರೈತಾಪಿ ವರ್ಗ ವಿಷ ವರ್ತುಲದಲ್ಲಿ ಸಿಲುಕಿ ನಲುಗುತ್ತಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಡಾ.ಸ್ವಾಮಿನಾಥನ್ ವರದಿ ಪ್ರಕಾರ ರೈತರಿಗೆ ಖರ್ಚು ಕಳೆದು ಶೇ. 50ರಷ್ಟು ಲಾಭಾಂಶ ದೊರೆಯಬೇಕು. ಆದರೆ ಇದುವರೆಗೂ ಕೇಂದ್ರ ಸರ್ಕಾರ ಡಾ.ಸ್ವಾಮಿನಾಥನ್ ವರದಿ ಜಾರಿಗೆ ತಂದಿಲ್ಲ. ರಾಜ್ಯದ ರೈತರ ಹಿತಕ್ಕಾಗಿ ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ಹೆಚ್ಚಿಸುವ ಜತೆಗೆ ಸ್ವಾಮಿನಾಥನ್ ವರದಿ ಜಾರಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.