ಭಟ್ಕಳ,
ಏ 9,ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ೯ ಮಂದಿಯಲ್ಲಿ ಕೊರೋನಾ
ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರಾದ್ಯಂತ ವೈದ್ಯಕೀಯ ತುರ್ತು ಪರಿಸ್ಥಿತಿ
ಘೋಷಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಸೋಂಕು ಹರಡಂತೆ ನೋಡಿಕೊಳ್ಳುವ ಸಲುವಾಗಿ
ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು
ಖುದ್ದಾಗಿ ಪರೀಕ್ಷಿಸಲು ಪಶ್ಚಿಮ ವಲಯ ಪೊಲೀಸ್ ಐಜಿಪಿ ದೇವ್‌ಜ್ಯೋತಿ ಭಟ್ಕಳಕ್ಕೆ ಭೇಟಿ
ನೀಡಿ ಪರಿಶೀಲಿಸಿದರು. ಗೃಹ ಕ್ವಾರೆಂಟೈನ್ ಆಗಿ ಪರಿವರ್ತಿಸಲಾಗಿರುವ ಅಂಜುಮನ್
ಹಾಸ್ಟೆಲ್ ಸೇರಿದಂತೆ ಭಟ್ಕಳ ತಾಲೂಕಿನ ಆಸ್ಪತ್ರೆ ಹಾಗೂ ಇತರ ಪ್ರದೇಶಗಳಿಗೆ ತೆರಳಿ
ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯ ಜನತೆಯಲ್ಲಿ ಜಾಗೃತಿ
ಮೂಡಿಸಲಾಗುತ್ತಿದೆ. ಸರ್ಕಾರದ ಕ್ರಮಕ್ಕೆ ಜನರಿಂದ ವ್ಯಾಪಕ ಸಹಕಾರ ದೊರೆಯುತ್ತಿದೆ.
ಹಲವೆಡೆ ಸೋಂಕು ಶಂಕಿತರು ಸ್ವಪ್ರೇರಣೆಯಿಂದ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದಾರೆ
ಎಂದರು.