ಮೈಸೂರು, ಜ.10 ಜೆಎನ್‌ಯು ಹಿಂಸಾಚಾರ ಘಟನೆಯನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದ ವೇಳೆ ‘ಫ್ರೀ ಕಾಶ್ಮೀರ’ ಭಿತ್ತಿಪತ್ರ ಪ್ರದರ್ಶಿಸಿದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವರದಿಯನ್ನು ವಿಶ್ವವಿದ್ಯಾಲಯದ ಕುಲಸಚಿವ ಆರ್. ಶಿವಪ್ಪ, ರಾಜ್ಯಪಾಲರಿಗೆ ರವಾನಿಸಿದ್ದಾರೆ.ಇ-ಮೇಲ್ ಮೂಲಕ ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದು, ಪ್ರತಿಭಟನೆ ನಡೆಸಿದ ಉದ್ದೇಶ, ಸಂಘಟಕರ ವಿವರ, ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಹಾಗೂ ವಿಶ್ವವಿದ್ಯಾಲಯದಿಂದ ನೀಡಿರುವ ನೋಟೀಸ್‌ನ ಪ್ರತಿಯನ್ನು ವರದಿಯಲ್ಲಿ ಲಗತ್ತಿಸಿ, ಅದನ್ನು ರಾಜ್ಯಸರ್ಕಾರಕ್ಕೂ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕಾಶ್ಮೀರ ಮುಕ್ತ ನಾಮಫಲಕ ಪ್ರದರ್ಶಿಸಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲ ವಿ.ಆರ್. ವಾಲಾ, ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಿವಪ್ಪ ಈ ವರದಿ ರವಾನಿಸಿದ್ದಾರೆ.ಈ ಮಧ್ಯೆ ಕಾಶ್ಮೀರ ಮುಕ್ತ ನಾಮಫಲಕ ಪ್ರದರ್ಶಿಸಿದ ವಿದ್ಯಾರ್ಥಿ ಮುಖಂಡರನ್ನು ಬಂಧಿಸುವಂತೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ ನಡೆಸಿತು.ಈ ನಡುವೆ ನಗರದ ಜೆಎಸ್‌ಎಸ್ ವಿದ್ಯಾಪೀಠ ವೃತ್ತದಲ್ಲಿ ಪ್ರತಿಭಟನೆ ನಡೆಸಿ ವಿದ್ಯಾರ್ಥಿಗಳ ವರ್ತನೆ ವಿರುದ್ಧ ಘೋಷಣೆ ಕೂಗಿದರು. ಎಫ್‌ಐಆರ್ ದಾಖಲಾಗಿರುವ ವಿದ್ಯಾರ್ಥಿಗಳ ಮುಖಂಡರನ್ನು ಕ್ಯಾಂಪಸ್‌ನಿಂದ ಹೊರ ಹಾಕಬೇಕೆಂದು ಎಬಿವಿಪಿ ಸಂಚಾಲಕ ಗೌತಮ್ ಒತ್ತಾಯಿಸಿದ್ದಾರೆ.ಇದೇ ವೇಳೆ ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ವಿ.ಸಿ. ಲಿಂಗರಾಜಗೌಡ ಪ್ರತಿಕ್ರಿಯಿಸಿ ಹೋರಾಟದಲ್ಲಿ ಭಾಗಿಯಾಗಿದ್ದ ಎಲ್ಲರ ಮೇಲೂ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಬಾಲಕೃಷ್ಣ ಪಾಲ್ಗೊಂಡಿದ್ದಾರೆ. ಆದರೆ, ಅವರಿಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೂ ಸಂಬಂಧವಿಲ್ಲ ಎಂದು ನಳಿನಿ ಬಾಲಕೃಷ್ಣ ಬಳಿ ಪೊಲೀಸರು ಹೇಳಿಕೆ ಪಡೆದುಕೊಂಡು ಉಳಿದವರನ್ನು ಬಚಾವ್ ಮಾಡುವ ಯತ್ನ ನಡೆದಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಬಿವಿಎಸ್ ಸಂಶೋಧನಾ ವಿದ್ಯಾರ್ಥಿಗಳ ಸಂಘ, ಎಸ್‌ಡಿಪಿಐ, ಮುಸ್ಲಿಂ ಲಿಂಗ್ ಭಾಗಿಯಾಗಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರ ಮೇಲೂ ಮೈಸೂರು ವಿವಿ ಮತ್ತು ಪೊಲೀಸ್ ಕಮಿಷನರ್ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.