ಬೆಳಗಾವಿ 06: ಗುರುವಾರ ನಡೆದ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಾಜಿ ಕೇಂದ್ರ ಸಚಿವರ ನಾಮಕರಣದ ವಿಚಾರವಾಗಿ ಗಂಭೀರ ಚರ್ಚೆ ನಡೆಯಿತು. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಬೆಳಗಾವಿಯ ಕ್ಲಬ್ ರಸ್ತೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕ ದಿವಂಗತ ಬಿ. ಶಂಕರಾನಂದ ಅವರ ಹೆಸರು ನಾಮಕರಣದ ವಿಚಾರವನ್ನು ಪ್ರಸ್ತಾಪಿಸಿ ಎಲ್ಲರ ಗಮನ ಸೆಳೆದರು.
ಅಲ್ಲದೇ ಮಾಜಿ ಕೇಂದ್ರ ಸಚಿವ ಬಿ ಶಂಕರಾನಂದ ಅವರ ಜನ್ಮ ಶತಾಬ್ದಿ ಹಿನ್ನೆಲೆ ಬೆಳಗಾವಿಯ ಕ್ಲಬ್ ರಸ್ತೆಗೆ ಬಿ. ಶಂಕರಾನಂದ ಮಾರ್ಗವೆಂದು ನಾಮಕರಣಗೊಳಿಸಿ ಅವರ ಮೂರ್ತಿಯನ್ನು ಸ್ಥಾಪಿಸಬೇಕೆಂದು ನಗರಸೇವಕ ಸಂದೀಪ್ ಜಿರಗ್ಯಾಳ್ ಪರಿಷತ್ತನ್ನ ಆಗ್ರಹಿಸಿದರು. ಈ ವೇಳೆ ನಾಮನಿರ್ದೇಶಕ ಸದಸ್ಯ ರಮೇಶ್ ಸೊಂಟಕ್ಕಿ ಅವರು ಮೊದಲು ಕ್ಲಬ್ ರೋಡ್‌ಗೆ ಬೇರೆಯವರ ಹೆಸರು ಏನಾದರೂ ಇದೆಯೋ ಎಂಬುದನ್ನು ಖಚಿತಪಡಿಸಿಕೊಂಡು ಅವರ ಹೆಸರನ್ನ ಇಡಬೇಕಾಗಿ ಸಲಹೆ ನೀಡಿದರು.
ಇದಕ್ಕೆ ಅಭಿಯಂತೆ ಲಕ್ಷ್ಮೀ ನಿಪ್ಪಾನಿಕರ್ ಅವರು ಈ ಕುರಿತು ಪರೀಶೀಲನೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಕಾಂಗ್ರೆಸ್ಸಿನ ಹಿರಿಯ ಮುಖಂಡ ಬಿ. ಶಂಕರಾನಂದ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಬೆಳಗಾವಿಯ ಕ್ಲಬ್ ರಸ್ತೆಗೆ ಅವರ ಹೆಸರು ನಾಮಕರಣ ಮಾಡುವ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.