ಬೆಂಗಳೂರು, ಏ.9, ಕೊರೊನಾ ತಡೆಗಟ್ಟಲು ಪರಿಣಿತ ವೈದ್ಯರ ಸಮಿತಿ ಮುಖ್ಯಮಂತ್ರಿಗಳಿಗೆ ವರದಿ ನೀಡಿದ್ದು, ಈ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದೇಶದಲ್ಲಿ ಕೊರೊನಾ ಮೂರನೇ ಹಂತಕ್ಕೆ ಹೋಗದಂತೆ ತಡೆಗಟ್ಟಲು, ಇಡೀ ಸಮಯದಾಯಕ್ಕೆ ಹರಡದಂತೆ ನೋಡಿಕೊಳ್ಳಲು ಕೆಲವು ರಾಜ್ಯದಲ್ಲಿ ಕಠಿಣ ಕ್ರಮ ಈಗಾಗಲೇ ಕೈಗೊಂಡಿದ್ದಾರೆ. ಈ ಬಗ್ಗೆಯೂ ಇಂದು ಚರ್ಚೆ ಮಾಡಿ ಕಠಿಣ ಕ್ರಮ ಕೈಗೊಳ್ಳಲು ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಪೊಲೀಸ್ ಪಾಸ್ ದುರ್ಬಳಕೆ ಆಗುತ್ತಿರುವ ಬಗ್ಗೆ ನಾನೇ ಬುಧವಾರ ರಿಯಾಲಿಟಿ ಚೆಕ್ ಮಾಡಿದ್ದು,ಕೆಲವರು ಸಹಿ ಇರದ ಕಲರ್ ಜೆರಾಕ್ಸ್ ಪಾಸ್ ಮಾಡಿಸಿಕೊಂಡು ಓಡಾಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಂಡು ವಾಹನ ವಶಕ್ಕೆ ಪಡೆಯಲು ಸೂಚನೆ ನೀಡಿದ್ದೇನೆ.ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಮಾಡಲು ನಿರ್ದೇಶನ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಪಾಸ್ ನೀಡಿದ್ದೇವೆ ಎಂಬುದು ಸತ್ಯಕ್ಕೆ ದೂರವಾದದ್ದು. ಅಗತ್ಯ ಸೇವೆಗಳ ಸರಬರಾಜು ಸಂಬಂಧ ಕಾಂಗ್ರೆಸ್ ಕಾರ್ಯಕರ್ತರಿಗೂ ಪಾಸ್ ಗಳನ್ನೂ ನೀಡಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.