ಬಿಹಾರದಲ್ಲಿ 170ಕ್ಕೂ ಹೆಚ್ಚು ಮಕ್ಕಳ ಸಾವು ಆರೋಗ್ಯ ವ್ಯವಸ್ಥೆಯ ವೈಫಲ್ಯತೆ ಖಂಡಿಸಿ ಪ್ರತಿಭಟನೆ

ಧಾರವಾಡ 25: ಬಿಹಾರದಲ್ಲಿ ಮೆದುಳು ಜ್ವರದಿಂದ 170ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಖಂಡಿಸಿ ಎಸ್ಯುಸಿಐ-ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯು ಕರೆಯ ಮೇರೆಗೆ ಇಂದು ನಗರದ ವಿವೇಕಾನಂದ ವೃತ್ತದಲ್ಲಿ ಎಸ್ಯುಸಿಐ-ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. 

ಎಸ್ಯುಸಿಐ-ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಗಂಗಾಧರ ಬಡಿಗೆರ ಮಾತನಾಡಿ ಬಿಹಾರದ ಮುಜಾಫರ್ಪುರ ಜಿಲ್ಲೆಯೊಂದರಲ್ಲೇ 170ಕ್ಕೂ ಹೆಚ್ಚು ಮಕ್ಕಳು ತೀವ್ರವಾದ ಮೆದುಳಿನ ಉರಿಯೂತ ಕಾಯಿಲೆಯಿಂದ ಸಾವನ್ನಪ್ಪಿರುವುದು ಅತ್ಯಂತ ವಿಷಾದಕರ ಸಂಗತಿ. ಬಿಹಾರ ರಾಜ್ಯದಲ್ಲಿ ಇದುವರೆಗೆ ಇಂತಹ 600ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬುದು ಗಾಬರಿ ಹುಟ್ಟಿಸುವಂತಹ ವಿಷಯ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಇಂತಹ ಸಂಪೂರ್ಣ ವೈಫಲ್ಯವನ್ನು ಇದು ತೋರಿಸುತ್ತದೆ. ಸರ್ಕಾರ  ಆಡಳಿತ ವ್ಯವಸ್ಥೆ ಚುನಾವಣಾ ತಯಾರಿಯಲ್ಲಿ ಮುಳುಗಿ ಈ ಕಾಯಿಲೆಯನ್ನು ಎದುರಿಸಲು ಸನ್ನದ್ಧರಾಗದಿರುವುದೇ ಈ ದುರಂತಕ್ಕೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಅವಶ್ಯಕವಿರುವಷ್ಟು ವೈದ್ಯರು, ಔಷಧಿಗಳು, ದಾದಿಯರು ಮೊದಲಾದ ಕೊರತೆಗಳನ್ನು ಆಸ್ಪತ್ರೆಗಳಲ್ಲಿ ಸರಿಪಡಿಸದೆ ಇರುವುದೇ ಇಂತಹ ವಿಪತ್ತಿಗೆ ಕಾರಣವಾಗಿದೆ. ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಮಿದುಳಿನ ಉರಿಯೂತದ ಸಮಸ್ಯೆಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆಯನ್ನು ಕೊಟ್ಟು ಜೀವ ಉಳಿಸುವುದು ಸಾಧ್ಯವಿದೆಯಾದರೂ ಅಂತಹ ಸೌಲಭ್ಯಗಳು ಲಭ್ಯವಿಲ್ಲ. ಆರೋಗ್ಯ ವ್ಯವಸ್ಥೆ ಹದಗೆಡಲು ಕಾರಣವಾದ ಕೇಂದ್ರ ಮತ್ತು ಬಿಹಾರ ರಾಜ್ಯ ಸರ್ಕಾರಗಳ ಇಂತಹ ದಿವ್ಯ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು.

ಜಿಲ್ಲಾ ಸಮಿತಿ ಸದಸ್ಯರಾದ ಲಕ್ಷ್ಮಣ ಜಡಗನ್ನವರ ಮಾತನಾಡಿ ಇಂತಹ ಸರಣಿ ಸಾವಿಗೆ ಈ ಮಕ್ಕಳು ಲಿಚಿ ಹಣ್ಣನ್ನು ತಿಂದಿರುವುದೇ ಕಾರಣ ಎಂದು ಹೇಳಿ ದಿಕ್ಕುತಪ್ಪಿಸಲಾಗುತ್ತಿದೆ. ಆದರೆ ಈ ವಿಷಯವನ್ನು ಅಧ್ಯಯನ ಮಾಡಿದ ವೈದ್ಯಕೀಯ ತಜ್ಞರ ಅಭಿಪ್ರಾಯದಲ್ಲಿ ಬಡತನ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ರಾತ್ರಿ ಊಟ ಮಾಡದೆ ಲಿಚಿ ಹಣ್ಣು ತಿಂದರೆ ಮಾತ್ರವೇ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮುಜಾಫರ್ಪುರದ ಸುತ್ತಲಿನಲ್ಲಿ ಪ್ರತಿ ವರ್ಷ ಮೇ- ಜೂನ್ ತಿಂಗಳಲ್ಲಿ ಲಿಚಿ ಹಣ್ಣಿನ ಕೊಯಿಲಿನ ಕಾಲದಲ್ಲಿ ಬಡ ಮಕ್ಕಳಲ್ಲಿ ಮೆದುಳಿನ ಉರಿಯೂತದ ಪ್ರಕರಣಗಳು ಮರುಕಳಿಸುತ್ತಿದ್ದು ಈ ವರ್ಷ ಅದು ಅತ್ಯಂತ ಹೆಚ್ಚು ದಾಖಲಾಗಿದೆ. ಲಿಚಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಮತ್ತು ಸುತ್ತಮುತ್ತಲಿನ ಬಡ ಕುಟುಂಬಗಳ ಮಕ್ಕಳು ರಾತ್ರಿ ಹೊತ್ತು ಕಡ್ಡಾಯವಾಗಿ ಊಟ ಮಾಡದೆ ಮಲಗಬಾರದು ಎಂಬ ಅರಿವನ್ನು ಮೂಡಿಸಬೇಕಿತ್ತು. ಆದರೆ ಸರ್ಕಾರ ಇದರಲ್ಲಿ ದಿವ್ಯ ನಿರ್ಲಕ್ಷ್ಯ ತೋರಿಸಿದೆ. ದೇಶದ ಪ್ರದಾನಿ ನರೇಂದ್ರ ಮೋದಿಯವರು ಕ್ರಿಕೇಟ್ ಆಟಗಾರರೊಬ್ಬರು ಗಾಯ ಮಾಡಿಕೊಂಡಾಗ ತಕ್ಷಣಕ್ಕೆ ಪ್ರತಿಕ್ರಿಯಿಸುತ್ತಾರೆ, ಆದರೆ ನೂರಾರು ಮಕ್ಕಳು ಬಲಿಯಾಗಿದ್ದರೂ ಇದರ ಬಗ್ಗೆ ತುಟಿಪಿಟುಕ್ಕೆನ್ನದಿರವುದು ಬಡಜನರ ಬಗ್ಗೆ ಅವರ ಧೋರಣೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ಮಕ್ಕಳ ಸಾವು ಎಂಬುದು ಅತ್ಯಂತ ಹೃದಯ ವಿದ್ರಾವಕ ಸಂಗತಿಯಾಗಿದ್ದು ಯಾವ ಪರಿಹಾರವೂ ಕೂಡ ಪೋಷಕರ ದುಃಖವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಹಾಗಿದ್ದರೂ ತಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಕನಿಷ್ಠ 10 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಬೇಕು. ಬಿಹಾರದಲ್ಲಿ ಈ ಕಾಯಿಲೆಯ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ತುರ್ತು  ಕ್ರಮ ಕೈಗೊಳ್ಳಬೇಕೆಂದು ಮತ್ತು ಇಂತಹ ವಿಪತ್ತು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜಾಸಾಬ್, ಭುವನಾ, ದೀಪಾ, ಶರಣು ಗೋನವಾರ, ರಮೇಶ ಹೊಸಮನಿ, ಮಧುಲತಾ, ಭವಾನಿಶಂಕರ್, ಮಾರುತಿ ಇಂಚಲ್, ಶಿವಾನಂದ, ಶಂಕರ್ ಕಮ್ಮಾರ ಸೇರಿದಂತೆ ನಾಗರಿಕರು, ವಿದ್ಯಾರ್ಥಿ -ಯುವಜನರು ಭಾಗವಹಿಸಿದ್ದರು.