ಖ್ಯಾತ ಇತಿಹಾಸಕಾರ ಷ.ಷೆಟ್ಟರ್ ನಿಧನ

ಬೆಂಗಳೂರು, ಫೆ.28 :    ಖ್ಯಾತ ಇತಿಹಾಸಕಾರ ಷ.ಷೆಟ್ಟರ್ ಶುಕ್ರವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ಸೇರಿದಂತೆ ಇತರ ಕೆಲವು ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು.

ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ. ಭೂಪಸಂದ್ರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬಳ್ಳಾರಿ ಜಿಲ್ಲೆ ಹಂಪಸಾಗರದಲ್ಲಿ  ಡಿಸೆಂಬರ್ 11, 1935ರಲ್ಲಿ ಜನಿಸಿದ್ದ ಅವರು, ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್‌ಗಳಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ ಮಾಡಿದ್ದಾರೆ.

1960–96ರವರೆಗೆ ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡಿದ್ದ ಅವರು, 1978–95ರವರೆಗೆ ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕರಾಗಿದ್ದರು. ನವದೆಹಲಿಯ ಇಂಡಿಯನ್‌ ಕೌನ್ಸಿಲ್‌ ಆಫ್‌ ಹಿಸ್ಟಾರಿಕಲ್‌ ರಿಸರ್ಚ್‌ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ಅವರು, ಬೆಂಗಳೂರು ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಪ್‌ ಅಡ್ವಾನ್ಸ್‌ಡ್‌ ಸ್ಟಡೀಸ್‌ನಲ್ಲಿ ಡಾ. ಎಸ್‌ ರಾಧಾಕೃಷ್ಣ್‌ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದರು.  2010ರಿಂದ ಇದೇ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ದಕ್ಷಿಣ ಭಾರತ ಶಾಖೆಯ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.

ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌, ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್‌ಗಳ ಸರ್ವಾಧ್ಯಕ್ಷ ಸ್ಥಾನ, ಮೆಲ್ಬೋರ್ನ್‌ (ಆಸ್ಟ್ರೇಲಿಯಾ) ವಿಶ್ವ ಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನ, ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಹಾಗೂ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನೂ ಅವರು ಅಲಂಕರಿಸಿದ್ದರು.

ಕುಂದಕುಂದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್‌, ಮಾಸ್ತಿ ಪ್ರಶಸ್ತಿ, ರನ್ನ ಪ್ರಶಸ್ತಿ, 2016ರ ಶಾಸ್ತ್ರೀಯ ಕನ್ನಡ ವಾಙ್ಮಯದ ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು, ಪುರಸ್ಕಾರಗಳು ಅವರಿಗೆ ಸಂದಿವೆ. ಬೆಂಗಳೂರಿನಲ್ಲಿ ಹಳಗನ್ನಡ ಮತ್ತು ವಚನ ಸಾಹಿತ್ಯದ ಓದು ಸಂಶೋಧನೆಯಲ್ಲಿ ಅವರು ಇತ್ತೀಚಿನ ದಿನಗಳವರೆಗೂ ತೊಡಗಿಕೊಂಡಿದ್ದರು.

ಗಣ್ಯರ ಸಂತಾಪ:

ಶೆಟ್ಟರ್ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೆರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇತಿಹಾಸ  ತಜ್ಞ ಕನ್ನಡ ಸಾಹಿತ್ಯದ ಪ್ರಮುಖ ಕೊಂಡಿ ಶೆಟ್ಟರ್ ಇನ್ನಿಲ್ಲದಿರುವುದು ಅತೀವ ನೋವು  ತಂದಿದೆ ಶ್ರೇಷ್ಠ ವಿದ್ವಾಂಸರಾಗಿದ್ದ ಶೆಟ್ಟರ್ ಅವರು ನನ್ನ ಕೋರಿಕೆ ಮೇರೆಗೆ ಬಸವಣ್ಣನವರ  ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಭಾಷೆಗಳಲ್ಲಿ ಒಂದು ಸುಂದರ ಪುಸ್ತಕ  ತರಬೇಕು ಎಂಬ  ನನ್ನ ಕನಸನ್ನು ನನಸು ಮಾಡಲು ಹೊರಟಿದ್ದರು. ಅವರಿಲ್ಲದ  ಆ ಯೋಜನೆಗೆ ಇದೀಗ  ಮುಗಿಸುವುದು ಹೇಗೆ ಎಂಬ ಚಿಂತೆ ಕಾಡತೊಡಗಿದೆ. ಇಂತಹ ಶ್ರೇಷ್ಠ  ವಿದ್ವಾಂಸರು ಶತಮಾನಕ್ಕೊಮ್ಮೆ ಹುಟ್ಟುತ್ತಾರೆ. ಜ್ಞಾನದ ಭಂಡಾರವಾಗಿದ್ದರು. ಸರಳ ಸಜ್ಜನ ನೇರ ನುಡಿಗಳಿಂದ ಎಲ್ಲರ ಮನಗೆದ್ದಿದ್ದರು ಎಂದು ಮಾಜಿ ಶಾಸಕ ಹಾಗೂ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ್ ಸಂತಾಪ ಸೂಚಿಸಿದ್ದಾರೆ.