ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲ- ಜಿಲ್ಲಾಧಿಕಾರಿ

Dc meeting at karwar dc office


ಅಧಿಕಾರಿಗಳು ಅನುಮತಿಯಿಲ್ಲದೆ ಕೇಂದ್ರ ಸ್ಥಾನ‌ ಬಿಡುವಂತಿಲ್ಲ- ಜಿಲ್ಲಾಧಿಕಾರಿ

ಕಾರವಾರ: ಅಗಷ್ಟ-10:  ಸರಕಾರಿ  ಅಧಿಕಾರಿಗಳು ಹಾಗೂ ನೌಕರರು ಅನುಮತಿಯಿಲ್ಲದೇ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ  ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಎಲ್ಲಾ ಅಧಿಕಾರಿ ವರ್ಗಕ್ಕೆ ಎಚ್ಚರಿಸಿದ್ದಾರೆ.

        ಕಳೆದ  ಒಂದು ವಾರದಿಂದ ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿದ್ದು ಎಲ್ಲಾ ನದಿಕೊಳ್ಳಗಳು ತುಂಬಿ ಹರಿಯುತ್ತಿದ್ದು ಈಗಾಗಲೇ ಹೊನ್ನಾವರ ತಾಲೂಕಿನ ಗುಂಡಬಾಳ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕಾಳಜಿ ಕೇಂದ್ರಗಳನ್ನು ತೆರೆಯಲಾಗಿರುವ ಹಿನ್ನಲೆಯಲ್ಲಿ  ಜಿಲ್ಲಾಧಿಕಾರಿ ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆಯನ್ನು ನಡೆಸಿದ ಜಿಲ್ಲಾಧಿಕಾರಿಗಳು  ಪ್ರಸ್ತುತ ಕೊವಿಡ್  ಪರಿಸ್ಥಿತಿ ಇರುವದರಿಂದ ಕೊವಿಡ್-19 ಮಾರ್ಗಸೂಚಿಯಂತೆ ಕಾಳಜಿ ಕೇಂದ್ರದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸುವಂತೆ ಸೂಚಿಸಿದರು.  ಪ್ರವಾಹ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ಸರಕಾರ ಹೊರಡಿಸುವ ಸುತ್ತೋಲೆಯ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿಗಳು  ಸುತ್ತೋಲೆಯಲ್ಲಿ ನಿಗಧಿಪಡಿಸಿದ ಹೊಸ ದರಗಳಂತೆ ಪರಿಹಾರವನ್ನು ನೀಡಲು ತಿಳಿಸಿದರು.  ಪ್ರವಾಹದಲ್ಲಿ ಹಾನಿಗೊಳಗಾಗುವ ಮನೆ ಹಾಗೂ ಬೆಳೆಗಳಿಗೆ ಪರಿಹಾರ ವಿತರಿಸುವ ಕುರಿತಂತೆ ಜಂಟಿ ಸಮೀಕ್ಷೆಯನ್ನು ನಡೆಸಿ ಕೂಡಲೇ ತಂತ್ರಾಂಶದಲ್ಲಿ ದಾಖಲಿಸಿ ಶೀಘ್ರ ಪರಿಹಾರ ನೀಡುವಲ್ಲಿ ಕ್ರಮ ಜರುಗಿಸಬೇಕು. ಪರಿಹಾರ ವಿತರಣೆಗೆ ಸಂಬಂದಿಸಿದಂತೆ ಸಾರ್ವಜನಿಕರಿಂದ ಅಥವಾ ಜನಪ್ರತಿನಿಧಿಗಳಿಂದ  ಸಕಾರಣ ಸಹಿತ ದೂರು ಬಂದಲ್ಲಿ ಸಂಬಂದಿಸಿದ ತಹಸೀಲ್ದಾರರ ವಿರುದ್ದ ಕ್ರಮ ಜರುಗಿಸಲಾಗುವದು ಎಂಬ ಜಿಲ್ಲಾಧಿಕಾರಿಗಳು ಎಚ್ಚರಿಕೆಯನ್ನು ನೀಡಿದರು.  ಯಾವುದೇ  ಸರಕಾರಿ ಅಧಿಕಾರಿಗಳು ಹಾಗೂ ನೌಕರರು  ಪೂರ್ವಾನುಮತಿ ಇಲ್ಲದೇ ಯಾವುದೇ ಕಾರಣಕ್ಕೂ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ.  ಎಲ್ಲಾ ತಹಸೀಲ್ದಾರ ಕಛೇರಿಗಳಲ್ಲಿ ತೆರೆಯಲಾಗಿರುವ ಕಂಟ್ರೋಲ್ ರೂಮ್ ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.      

         ಈ ಸಂದರ್ಭದಲ್ಲಿ  ಅಪರ ಜಿಲ್ಲಾಧಿಕಾರಿಗಳಾದ ಕೃಷ್ಣಮೂರ್ತಿ.ಹೆಚ್.ಕೆ, ಸಹಾಯಕ ಆಯುಕ್ತರಾದ ಶ್ರೀಮತಿ ಪ್ರೀಯಾಂಗ. ಎಂ, ತಹಸೀಲ್ದಾರ  ಆರ್.ವಿ.ಕಟ್ಟಿ  ಹಾಗೂ ವಿಡಿಯೋ ಸಂವಾದದ ಮೂಲಕ ಜಿಲ್ಲೆಯ ಎಲ್ಲಾ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಹಾಗೂ ಇತರರು ಹಾಜರಿದ್ದರು.