ದಾಂಡೇಲಿ ಬೀದಿ ನಾಯಿಗಳ ಬಗ್ಗೆ ಎಚ್ಚೆತ್ತ ನಗರ ಸಭೆ

ದಾಂಡೇಲಿ ಬೀದಿ ನಾಯಿಗಳ ಬಗ್ಗೆ ಎಚ್ಚೆತ್ತ ನಗರ ಸಭೆ Dandeli City Council concerned about stray dogs

               ಕಾರವಾರ 17: ದಾಂಡೇಲಿಯಲ್ಲಿ  2024 ರಲ್ಲಿ ಪ್ರಾರಂಭವಾದ ಬೀದಿ ನಾಯಿಗಳ ಉಪಟಳ, ಅಮಾಯಕ ಮಕ್ಕಳು ಮತ್ತು ಸಾರ್ವಜನಿಕರನ್ನು ಕಚ್ಚಿ ಗಾಯಗೊಳಿಸಿದ ನಂತರ, ಬೀದಿ ನಾಯಿ ಹಿಡಿಯುವ ಕಾರ್ಯಾಚರಣೆಗೆ ನಗರಸಭೆ ಮುಂದಾಗಿದೆ. ಒಂದೇ ದಿನ ಮೂರು ಜನರನ್ನು ಕಚ್ಚಿದ ನಾಯಿಗೆ ರೇಬೀಸ್ ಇದೆಯೇ ಪರೀಕ್ಷೆಗಾಗಿ, ನಾಯಿ ಹಿಡಿಯಿರಿ ಕಾರ್ಯಾಚರಣೆಗೆ ನಗರಸಭೆ ಸಿಬ್ಬಂದಿಗಳನ್ನು ನಿಯೋಜಿಸಿದೆ. 

               ಸುಪ್ರಿಂಕೋರ್ಟ ಆದೇಶದ ಹಿನ್ನೆಲೆಯಲ್ಲಿ ದಾಂಡೇಲಿ ನಗರಸಭೆ ಬೀದಿನಾಯಿಗಳ ನಿಯಂತ್ರಣಕ್ಕೆ ಸಹ ಹೆಜ್ಜೆ ಇಟ್ಟಿದೆ.   ಬೀದಿ ನಾಯಿಗಳನ್ನು ನಿಯಂತ್ರಿಸಲು ಜನರು  ನಗರಸಭೆಯನ್ನು ಸತತವಾಗಿ ಒತ್ತಾಯಿಸುತ್ತಲೇ ಬಂದಿದ್ದರು.  ಆದರೆ ನಗರಸಭಾ ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು ಕಾನೂನು ಕಟ್ಟಳೆಗಳ ಸಬೂಬು ಹೇಳುತ್ತಲೇ ಪರವಾನಗಿಗಾಗಿ ಪತ್ರ ಬರೆಯಲಾಗಿದೆ ಎಂದು ದಿನದೂಡುತ್ತಿದ್ದರು.  ನಿರ್ದೇಶನ ಬಂದೊಡನೆ ಕ್ರಮ ಜರುಗಿಸುವುದಾಗಿ ಹೇಳಿ ಕಾಲಹರಣ ಮಾಡುತ್ತಲೇ ಬಂದಿದ್ದರು. ಈಗ ನಗರಸಭೆಯಲ್ಲಿ  ಜನಪ್ರತಿನಿಧಿಗಳ ಅಧಿಕಾರ ಮುಗಿದು, ಆಡಳಿತಾಧಿಕಾರಿಗಳ ನೇಮಕವಾಗಿದೆ. ಕಳೆದೊಂದು ವಾರದಲ್ಲಿ 2 ವಯಸ್ಕರು, 3 ಜನ  ಮಕ್ಕಳಿಗೆ  ಬೀದಿ ನಾಯಿ ಕಚ್ಚಿ ಗಾಯಗೊಳಿಸಿದ್ದವು.    

         ಕಳೆದ ಶುಕ್ರವಾರ ಕಾನ್ವೆಂಟ್ ಪ್ರಾಥಮಿಕ ಶಾಲೆಯ ಹತ್ತಿರ ಮೂವರು ವಿದ್ಯಾರ್ಥಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ  ಗಾಯಗೊಳಿಸಿದ್ದವು.  ಸ್ಥಳಕ್ಕೆ ಪೌರಾಯುಕ್ತ ವಿವೇಕ ಬನ್ನೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಿಸಿ ಬೀದಿನಾಯಿಗಳ ಕಾಟಕ್ಕೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರು. ನಂತರ ಪೌರಾಯುಕ್ತರು ನಗರಸಭೆಯ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಚರ್ಚಿಸಿ, ರವಿವಾರ ಬೆಳಿಗ್ಗೆ  ಆಕ್ರಮಣಕಾರಿ ಬೀದಿ ನಾಯಿಗಳನ್ನು ಬಲೆ ಹಾಕಿ ಹಿಡಿದು ವಾಹನದಲ್ಲಿ ಬಂಧಿಸಿದರು. ನಾಯಿಗಳನ್ನು ರೇಬಿಸ್ ಟೆಸ್ಟ ಗೆ ಕಳುಹಿಸಲು  ಪಶು ವೈದ್ಯ ಇಲಾಖೆಯ ನೆರವು ಪಡೆಯಲಾಗಿದೆ. ದಾಂಡೇಲಿ  ನಗರದಲ್ಲಿ ಅಂದಾಜು 500 ರಷ್ಟು ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ನಾಯಿ ಹಿಡಿಯುವ  ಕಾರ್ಯಾಚರಣೆ ಎರಡು ವಾರಗಳ ಕಾಲ ಮುಂದುವರೆಯಲಿದೆ ಎಂದು ಪೌರಾಯುಕ್ತ ವಿವೇಕ ಬನ್ನೆ ತಿಳಿಸಿದ್ದಾರೆ.