91ನೇ ವಸಂತಕ್ಕೆ ದಲಾಯಿ ಲಾಮಾ; ಮುಂಡಗೋಡದಲ್ಲಿ ಶಾಂತಿಯ ಸಂದೇಶದೊಂದಿಗೆ ಅದ್ಧೂರಿ ಆಚರಣೆ

91ನೇ ವಸಂತಕ್ಕೆ ದಲಾಯಿ ಲಾಮಾ; ಮುಂಡಗೋಡದಲ್ಲಿ ಶಾಂತಿಯ ಸಂದೇಶದೊಂದಿಗೆ ಅದ್ಧೂರಿ ಆಚರಣೆ Dalai Lama turns 91; grand celebration with a message of peace in Mundgod

ಲೋಕದರ್ಶನ ವರದಿ  

ಮುಂಡಗೋಡ 06 : ತಾಲೂಕಿನ ಟಿಬೆಟಿಯನ್ ಕಾಲೋನಿಯಲ್ಲಿ ಪರಮಪೂಜ್ಯ ಬೌದ್ಧ ಧರ್ಮಗುರು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ದಲಾಯಿ ಲಾಮಾ ಅವರ 91ನೇ ಜನ್ಮದಿನವನ್ನು ಭಕ್ತಿ, ಸಂಭ್ರಮ ಮತ್ತು ಶಾಂತಿಯ ಸಂದೇಶದೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಭಾಗವಹಿಸಿ ಟಿಬೆಟಿಯನ್ ಸಮುದಾಯದೊಂದಿಗೆ ಜನ್ಮದಿನದ ಸಂಭ್ರಮವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ದಲಾಯಿ ಲಾಮಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಶಾಸಕರು, ನಂತರ ಕೇಕ್ ಕತ್ತರಿಸುವ ಮೂಲಕ ಜನ್ಮದಿನಕ್ಕೆ ಶುಭಾಶಯ ಕೋರಿದರು.  

ಈ ವೇಳೆ ಟಿಬೆಟಿಯನ್ ಸಮುದಾಯದ ಸದಸ್ಯರು ಹಾಗೂ ಸಾರ್ವಜನಿಕರು ಹರ್ಷೋದ್ಗಾರಗಳೊಂದಿಗೆ ಸಂಭ್ರಮದಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್, “ಪರಮಪೂಜ್ಯ ದಲಾಯಿ ಲಾಮಾ ಅವರು ವಿಶ್ವಕ್ಕೆ ಶಾಂತಿ, ಪ್ರೀತಿ, ಸಹಬಾಳ್ವೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರುತ್ತಿರುವ ಮಹಾನ್ ವ್ಯಕ್ತಿತ್ವ. ಅವರ ಆದರ್ಶಗಳು ಇಂದಿನ ಪೀಳಿಗೆಗೆ ದಾರೀದೀಪವಾಗಿದ್ದು, ಅವರ ಚಿಂತನೆಗಳು ವಿಶ್ವಮಾನವ ಕುಲಕ್ಕೆ ಶಾಶ್ವತ ಪ್ರೇರಣೆಯಾಗಿದೆ,” ಎಂದು ಹೇಳಿದರು. ಈ ಸಂದರ್ಭದಲ್ಲಿ ಟಿಬೆಟಿಯನ್ ಸಮುದಾಯದ ಪ್ರಮುಖರು, ವಿವಿಧ ಗಣ್ಯರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ದಲಾಯಿ ಲಾಮಾ ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಶುಭ ಹಾರೈಸಿದರು.