ಬೀದರ್-ಬೆಂಗಳೂರು ನಡುವೆ ಟ್ರೂಜೆಟ್‌ನಿಂದ ಪ್ರತಿನಿತ್ಯ ವಿಮಾನ ಸೇವೆ: ಶುಕ್ರವಾರ ಯಡಿಯೂರಪ್ಪ ಹಸಿರು ನಿಶಾನೆ

ಬೆಂಗಳೂರು, ಫೆ.6 :     ಹೈದರಾಬಾದ್ ಮೂಲದ ಟರ್ಬೊ ಮೇಘಾ ಏರ್‌ವೇಸ್ ಪ್ರೈ. ಲಿ., ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಡಿ ಪ್ರತಿ ನಿತ್ಯ ಬೆಂಗಳೂರು- ಬೀದರ್ ನಡುವಿನ ವೈಮಾನಿಕ ಸೇವೆ ಆರಂಭಿಸುತ್ತಿದೆ.

ಶುಕ್ರವಾರ ಬೆಳಿಗ್ಗೆ ಆರಂಭವಾಗಲಿರುವ ಈ ವಿಮಾನ ಸೇವೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೀದರ್ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ. ರಾಜ್ಯದ ಮತ್ತೊಂದು ತುದಿಯ ನಗರವಾಗಿರುವ ಬೀದರ್ ಮತ್ತು ರಾಜಧಾನಿ ನಗರಿ ಬೆಂಗಳೂರು ನಡುವಿನ ಸಂಪರ್ಕ ಸಾಧ್ಯವಾಗಿಸಿರುವ ಟ್ರೂಜೆಟ್ ಉಭಯ ನಗರಗಳ ನಡುವೆ ಪ್ರತಿ ನಿತ್ಯ ವೈಮಾನಿಕ ಸೇವೆ ಒದಗಿಸಲಿದೆ. ಇದರಿಂದ ಬೀದರ್ ಸುತ್ತಮುತ್ತಲ ಅಭಿವೃದ್ಧಿಗೆ ವಿಶೇಷ ಅದ್ಯತೆ ದೊರೆಯಲಿದೆ. 

’ಉಡೇ ದೇಶ್‌ಕ ಆಮ್ ನಾಗರೀಕ್’ ಎಂಬ ಘೋಷ ವ್ಯಾಕ್ಯದೊಂದಿಗೆ ’ಉಡಾನ್’ ಹೆಸರಿನ ಮೂಲಕ ದೇಶದ ಪ್ರಾದೇಶಿಕ ನಗರಗಳನ್ನು ಸಂಪರ್ಕಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸನ್ನು ನನಸಾಗಿಸುತ್ತಿರುವ ಟ್ರೂಜೆಟ್ ಉಡಾನ್-1, 2 ಮತ್ತು 3 ರ ಅಡಿಯಲ್ಲಿ ತನಗೆ ವಹಿಸಿರುವ ಎಲ್ಲಾ ಮಾರ್ಗಗಳಲ್ಲೂ ವೈಮಾನಿಕ ಸೇವೆ ಒದಗಿಸುತ್ತಿರುವ ಏಕಮೇವ ಸಂಸ್ಥೆಯಾಗಿ ಹೊರ ಹೊಮ್ಮಿದೆ.

ತನ್ನ ಜಾಲದ 24 ನೇ ಕೇಂದ್ರವಾಗಿ ಬೀದರ್‌ಗೆ ಟ್ರೂಜೆಟ್ ತನ್ನ ವೈಮಾನಿಕ ಸೇವೆಯನ್ನು ಆರಂಭಿಸುತ್ತಿದ್ದು, 2015ರ ಜುಲೈ 12ರಂದು ಕಾರ್ಯಾಚರಣೆ ಆರಂಭಿಸಿದ ಸಂಸ್ಥೆಯು, ಮಹಾನಗರಗಳಿಂದಾಚೆಗೆ ಪ್ರಮುಖ ಮತ್ತು ಸಣ್ಣ ನಗರಗಳ ನಡುವಿನ ಸಂಪರ್ಕ ಸಾಧಿಸುವ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ದೇಶದ ಜತೆಗೂಡಿ ಕಾರ್ಯನಿರ್ವಹಿಸುತ್ತಿದೆ ಎಂದು ಟರ್ಬೋ ಮೆಘಾ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಕೆ. ಪಿ. ಪ್ರದೀಪ್ ಪ್ರತಿಪಾದಿಸಿದ್ದಾರೆ.

ಪ್ರತಿ ನಿತ್ಯ ಬೆಳಿಗ್ಗೆ 11.25ಕ್ಕೆ ಬೆಂಗಳೂರಿನಿಂದ ಹೊರಡಲಿರುವ ವಿಮಾನವು 1.05ಕ್ಕೆ ಬೀದರ್ ತಲುಪಲಿದ್ದು, ಮಧ್ಯಾಹ್ನ 1.35ಕ್ಕೆ ಬೀದರ್‌ನಿಂದ ಹೊರಟು 3.15 ಕ್ಕೆ ಬೆಂಗಳೂರಿಗೆ ಮರಳಲಿದೆ. ಈ ವೈಮಾನಿಕ ಸೇವೆ ಮೂಲಕ ಬೆಂಗಳೂರು ಮತ್ತು ಬೀದರ್ ನಗರಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದಿರುವ ಟ್ರೂಜೆಟ್ ಬೆಂಗಳೂರು- ಬೀದರ್ ನಡುವಿನ ಅಂತರವನ್ನು ತಗ್ಗಿಸಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಮತ್ತು ಸಣ್ಣ ನಗರಗಳ ನಡುವಿನ ವೈಮಾನಿಕ ಸೇವೆ ಆರ್ಥಿಕ ವ್ಯವಹಾರ ಮತ್ತು ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡಲಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಪ್ರದೀಪ್ ತಿಳಿಸಿದ್ದಾರೆ.

ಪ್ರಾದೇಶಿಕ ನಗರಗಳ ನಡುವೆ ವೈಮಾನಿಕ ಸಂಪರ್ಕ ಕಲ್ಪಿಸುವಲ್ಲಿ ಟ್ರೂಜೆಟ್ ಪ್ರಮುಖ ಪಾತ್ರವಹಿಸಿದ್ದು, ನಾಲ್ಕು ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಟ್ರೂಜೆಟ್ ತನ್ನ ಸಂಪರ್ಕ ಜಾಲದಲ್ಲಿ 24 ನಿಲ್ದಾಣಗಳನ್ನು ಹೊಂದಿದೆ ಎಂದು ಟರ್ಬೊ ಮೆಘಾ ಏರ್‌ವೇಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್.ಎನ್. ಮೂರ್ತಿ ತಿಳಿಸಿದ್ದು, ಪ್ರಾದೇಶಿಕ ನಗರಗಳನ್ನು ಸಂಪರ್ಕಿಸುವ ಉಡಾನ್- 1,2, ಮತ್ತು 3 ಯೋಜನೆಗಳಡಿ ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ಟ್ರೂಜೆಟ್ ದೇಶದ ಆರ್ಥಿಕ ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ಸಾಧನವಾಗಿ ಮಾರ್ಪಟ್ಟಿದೆ ಎಂದರು.

ಹೈದರಾಬಾದ್ ಮೂಲದ ಟರ್ಬೊ ಮೆಘಾ ಏರ್‌ವೇಸ್ ಪ್ರೈ. ಲಿ., ದೇಶದ ಪ್ರಮುಖ ಆರ್ಥಿಕ ಮತ್ತು ಪ್ರಾದೇಶಿಕ ನಗರಗಳನ್ನು ಸಂಪರ್ಕಿಸುತ್ತಿದ್ದು, ತನ್ನ ಜಾಲಕ್ಕೆ 24 ಕೇಂದ್ರಗಳನ್ನು ಸೇರ್ಪಡೆಗೊಳಿಸಿಕೊಂಡಿದ್ದು, ಹೈದರಾಬಾದ್, ಅಹ್ಮದಾಬಾದ್ ಮತ್ತು ಚೆನ್ನೈನಿಂದ ಔರಂಗಾಬಾದ್, ಬೆಳಗಾವಿ, ಬೆಂಗಳೂರು, ಬೀದರ್, ಕಡಪ, ಗೋವಾ, ಇಂದೋರ್, ಜೈಸಲ್ಮೆರ್, ಜಲಗಾವ್, ಖಾಂಡ್ಲಾ, ಕೊಲ್ಹಾಪುರ್, ಮಂಬೈ, ಮೈಸೂರು, ನಾಂದೇಡ್, ನಾಸಿಕ್, ಪೋರ್‌ಬಂದರ್, ರಾಜಮಂಡ್ರಿ, ಸೇಲಂ, ತಿರುಪತಿ, ವಿದ್ಯಾನಗರ ಮತ್ತು ವಿಜಯವಾಡಗಳಲ್ಲಿ ವೈಮಾನಿಕ ಸೇವೆ ಒದಗಿಸುತ್ತಿದೆ.