ಬೆಂಗಳೂರು 11: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶೀಘ್ರದಲ್ಲೇ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ಶುಕ್ರವಾರ ನಗರದ ಹೋಟೆಲ್ವೊಂದರಲ್ಲಿ ಪಕ್ಷದ ಮಾಜಿ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಾರದಿಂದ ಪಕ್ಷದ ಮುಖಂಡರೊಂದಿಗೆ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಲಾಗಿದೆ. ಮುಂದಿನ ವಾರದಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಲಾಗುವುದು. ಪ್ರತಿ ದಿನ 2 ಜಿಲ್ಲೆಯಂತೆ ಪ್ರವಾಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರವಾಸದ ವೇಳೆ ಸಾರ್ವಜನಿಕ ಸಭೆ ನಡೆಸುವುದಿಲ್ಲ. ಬದಲಿಗೆ ಕಾರ್ಯಕರ್ತರನ್ನು ಸೇರಿಸಿ ಚರ್ಚೆ ನಡೆಸಲಾಗುವುದು. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸನ್ನದ್ದಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.
ಇನ್ನು ಸಭೆ ಕುರಿತು ಮಾತನಾಡಿದಬಿ.ವೈ.ವಿಜಯೇಂದ್ರ ಅವರು ಇದು ಶಕ್ತಿ ಪ್ರದರ್ಶನ ಅಥವಾ ಯಾರನ್ನೂ ಪಕ್ಷದಿಂದ ಹೊರಹಾಕುವ ಉದ್ದೇಶದಿಂದ ನಡೆಸಿಲ್ಲ. ಪಕ್ಷವನ್ನು ಹೇಗೆ ಸರಿಪಡಿಸಬೇಕೆಂಬುದು ನನ್ನ ಕರ್ತವ್ಯ ಆಗಿದೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆಂದು ಹೇಳಿದರು.
ಡಿಕೆ ಶಿವಕುಮಾರ್ ಅವರು ಬೆಳಗಾವಿಯ ಅಧಿವೇಶನದಲ್ಲಿ ಒಂದು ಮಾತು ಹೇಳಿದ್ದಾರೆ. ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ಸಿಗದಿದ್ದ ವೇಳೆ ಅಧಿಕಾರ ಸಿಗದಿದ್ದರೆ ಒದ್ದು ಕಿತ್ಕೋಬೇಕು ಎಂದು ಅವರ ಗುರುಗಳು ಹೇಳಿದ್ದರು ಎಂದು ಹೇಳಿದ್ದರು. ಅದನ್ನು 15 ವರ್ಷಗಳ ಬಳಿಕ ಡಿಕೆ ಶಿವಕುಮಾರ್ ಅವರು ಸದನದ ಒಳಗಡೆ ನೆನಪು ಮಾಡಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಕೂಡ ಅಧಿಕಾರವನ್ನು ಒದ್ದು ಕಿತ್ತುಕೊಳ್ಳಲು ತಯಾರಾಗಿದ್ದಾರೆ. .
ಆದ್ದರಿಂದ ಸಿದ್ದರಾಮಯ್ಯನವರು ದಾಳ ಉರುಳಿಸುತ್ತಿದ್ದಾರೆ. ಬೇರೆ ಬೇರೆ ಸಚಿವರ ಮೂಲಕ ಡಿನ್ನರ್ ಪಾಲಿಟಿಕ್ಸ್ ಮಾಡಿಸುತ್ತಿದ್ದಾರೆ. ಇದರಿಂದ ಸಿದ್ದರಾಮಯ್ಯನವರ ಆಟ ಪ್ರಾರಂಭ ಆಗಿದೆ ಎಂಬುದು ಜಗಜ್ಜಾಹೀರಾಗಿದೆ. ಇತ್ತ ಆಡಳಿತ ಪಕ್ಷದ ಜಗಳವನ್ನು ರಾಜ್ಯದ ಜನ ನೋಡಲಿದ್ದಾರೆ ಎಂದರು.