ಡಿಡಿ ಚಂದನ ಸೆನ್ಸಾರಿ ಮಾಡಿ ಬಿತ್ತರಿಸುತ್ತಿದೆ: ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು, ಅ.12:    ಸ್ಪೀಕರ್ ಕಾಗೇರಿಯವರ ಜೊತೆ ನನಗೆ ವೈಯಕ್ತಿಕ ಜಗಳವೇನಿಲ್ಲ. ವಿಧಾನಮಂಡಲದ ಶಿಷ್ಟಾಚಾರ-ನಡವಳಿಕೆಗಳ ಬಗ್ಗೆ ನನಗೂ ತಿಳಿದಿದೆ. ಆದರೆ ಅಧಿಕಾರ ವಹಿಸಿಕೊಂಡ ಕೂಡಲೇ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡಿದ ಸ್ಪೀಕರ್, ಮೊದಲ ದಿನದಿಂದಲೇ ಬಿಜೆಪಿ ಸದಸ್ಯರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಖಂಡನೀಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ನಿನ್ನೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ಸ್ಪೀಕರ್ ಅವರೊಂದಿಗೆ ವಾಗ್ವಾದ ನಡೆಸುತ್ತಿದ್ದ ವೀಡಿಯೊವನ್ನು ಬಿಜೆಪಿ ತನ್ನ ಟ್ವೀಟ್ ಪೇಜ್ನಲ್ಲಿ ಅಪ್ಲೋಡ್ ಮಾಡಿ, ಈ ವಿಡಿಯೋ ನೋಡಿದವರಿಗೆ ಕಾಂಗ್ರೆಸ್ ಹಾಗೂ ಗೂಂಡಾ ಸಂಸ್ಕೃತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದರ ಅರಿವಾಗುತ್ತದೆ ಎಂದು ಬರೆದಿತ್ತು.  ಮಾತ್ರವಲ್ಲ, ತಮ್ಮ 5 ವರ್ಷದ ಅವಧಿಯಲ್ಲಿ ಇದೇ ಧೋರಣೆ ಪ್ರದರ್ಶಿಸಿ ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಈ ವರ್ತನೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿರ್ಣಾಮವಾಗುವುದು ಖಚಿತ ಎಂದು ಟ್ವಿಟ್ ಮಾಡಿತ್ತು. ಅದಕ್ಕೆ ಇಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸ್ಪೀಕರ್ ಅವರು ಕ್ಲಾಸ್ ಟೀಚರ್ ಅಲ್ಲ, ನಾವು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೂ ಅಲ್ಲ. ಸ್ಪೀಕರ್ ಸದನದಲ್ಲಿ ಅಂಪೈರ್ ರೀತಿ ಇರಬೇಕು, ಅವರೇ ಆಟಗಾರರ ರೀತಿಯಲ್ಲಿ ಮೈದಾನಕ್ಕೆ ಇಳಿದರೆ ನಾವು ಆಟಗಾರರ ರೀತಿಯಲ್ಲಿಯೇ ಎದುರಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡ ಆಡಳಿತ ಪಕ್ಷದ ಸದಸ್ಯರು, ಸರ್ಕಾರದ ವೈಫಲ್ಯದ ಬಗ್ಗೆ ಆಡಿದ ಮಾತುಗಳು ಮತ್ತು ಅವರ ಮುಖಗಳನ್ನು ಸರ್ಕಾರಿ ಕೃಪಾಪೋಷಿತ ಡಿಡಿ ಚಂದನ ವಾಹಿನಿ ಸೆನ್ಸಾರ್ ಮಾಡಿ ಬಿತ್ತರಿಸುತ್ತಿರುವುದು ಖಂಡನೀಯ ಎಂದು ಮತ್ತೊಂದು ಟ್ವೀಟ್ ನಲ್ಲಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿರೋಧಪಕ್ಷಗಳ ದನಿಯನ್ನು ದಮನಿಸಿ ಆಡಳಿತ ಪಕ್ಷಕ್ಕೆ ನೆರವಾಗುವ ಉದ್ದೇಶದಿಂದಲೇ ಸ್ಪೀಕರ್ ಅವರು ಟಿವಿ ಚಾನೆಲ್ಗಳ ಕ್ಯಾಮೆರಾಗಳಿಗೆ ನಿರ್ಬಂಧ ಹೇರಿರುವುದು ಕಳೆದೆರಡು ದಿನಗಳ ಕಲಾಪದಿಂದ ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದ್ದಾರೆ.