ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಡಿಸಿ, ಸಿಇಓ ಭೇಟಿ ನೀಡಿ ಪರೀಶೀಲನೆ

ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಡಿಸಿ, ಸಿಇಓ ಭೇಟಿ ನೀಡಿ ಪರೀಶೀಲನೆ  DC, CEO visit and inspect CET examination centers

ಲೋಕದರ್ಶನ ವರದಿ 

ಬಾಗಲಕೋಟೆ 23: ಜಿಲ್ಲೆಯ ಬಾಗಲಕೋಟೆ ಮತ್ತು ಜಮಖಂಡಿ ನಗರಗಳಲ್ಲಿ ಗುರುವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿ.ಪಂ ಸಿಇಓ ಶಶಿಧರ ಕುರೇರ ಭೇಟಿ ನೀಡಿ, ಪರೀಕ್ಷಾ ವ್ಯವಸ್ಥೆಗಳ ಪರೀಶೀಲಿಸಿದರು. ಜಿಲ್ಲಾಧಿಕಾರಿ ಸಂಗಪ್ಪ ಅವರು ನಗರದ ಎಸ್‌.ಬಿ.ಪಾಟೀಲ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಸ್ಥಾಪಿಸಲಾದ ಕೇಂದ್ರಕ್ಕೆ ಭೇಟಿ ನೀಡಿದರೆ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆ, ವಿದ್ಯಾಗಿರಿಯಲ್ಲಿರುವ ತುಂಗಳ ಸೈನ್ಸ್‌ ಕಾಲೇಜ, ಬಾಗಲಕೋಟೆ ನಗರದ ಬಸವೇಶ್ವರ ಆಟ್ಸ್‌ ಕಾಲೇಜ ಹಾಗೂ ಸರಕಾರಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಪರೀಕ್ಷಾರ್ಥಿಗಳಿಗೆ ಕಲ್ಪಿಸಲಾದ ಮೂಲಭೂತ ಸೌಲಭ್ಯಗಳು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಿದ್ಯುತ್ ಪೂರೈಕೆ ಸೇರಿದಂತೆ ಕೇಂದ್ರಗಳಲ್ಲಿ ಕೈಗೊಳ್ಳಲಾದ ಸಿದ್ದತೆಗಳನ್ನು ಪರೀಶೀಲಿಸಿದರು.  

ಪರೀಕ್ಷೆಗಳು ಯಾವುದೇ ಅಡಚಣೆ ಇಲ್ಲದೇ ಸುಗಮವಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷಾ ಕೇಂದ್ರದ ಸುತ್ತಮುತ್ತ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿರುವ ಬಗ್ಗೆ ಮಾಹಿತಿ ಪಡೆದು, ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ಸೌಲಭ್ಯಗಳನ್ನು ಸಮರ​‍್ಕವಾಗಿ ಒದಗಿಸುವಂತೆ ತಿಳಿಸಿದರು. ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ ಸಿಇಓ ಅವರ ಭೇಟಿ ಸಂದರ್ಭದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಎನ್‌.ವಾಯ್‌.ಬಸರಿಗಿಡದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಇದ್ದರು.