ಉನ್ನಾವೊ, ಉತ್ತರ ಪ್ರದೇಶ, ಅ 26: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಡಿಸೆಂಬರ್ 6 ರಿಂದ ಪ್ರಾರಂಭಗೊಳ್ಳಲಿದೆ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಸಂಸದ ಸಾಕ್ಷಿ ಮಹಾರಾಜ್ ಶನಿವಾರ ಘೋಷಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಸಾಕ್ಷಿ ಮಹಾರಾಜ್, ಆಯೋಧ್ಯೆ ಜಮೀನು ವಿವಾದ ಕುರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ಸಂವಿಧಾನಿಕ ನ್ಯಾಯಪೀಠ ನವಂಬರ್ 17ರೊಳಗೆ ತೀಪು ಪ್ರಕಟಿಸುವ ನಿರೀಕ್ಷೆಯಿದೆ ಎಂದರು ನವಂಬರ್ 17 ರೊಳಗೆ ಸುಪ್ರೀಂ ಕೋರ್ಟ್ ಅನುಕೂಲಕರ ತೀಪು ಪ್ರಕಟಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. 1992ರಲ್ಲಿ ವಿವಾದಾಸ್ಪದ ಕಟ್ಟಡ ದ್ವಂಸಗೊಳಿಸಿದ್ದ ವಾರ್ಷಿಕೋತ್ಸವ ದಿನವಾದ ಡಿಸೆಂಬರ್ 6 ರಂದು ಆಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಾಕ್ಷಿ ಮಹಾರಾಜ್ ಹೇಳಿದರು. ರಾಮ ಜನ್ಮ ಭೂಮಿಯ ಪರವಾಗಿ ಭಾರತೀಯ ಸರ್ವಾಕ್ಷಣಾ ಇಲಾಖೆಯ ಬಳಿ ಸಾಕಷ್ಟು ಬಲವಾದ ಪುರಾವೆಗಳಿವೆ. ಜೊತೆಗೆ ಮಂದಿರ ನಿರ್ಮಾಣಕ್ಕಾಗಿ ಶಿಯಾ ವಕ್ಫ್ ಮಂಡಳಿ ಬೆಂಬಲ ವ್ಯಕ್ತಪಡಿಸಿದೆ ಎಂದು ಹೇಳಿದರು. ರಾಮ ಮಂದಿರ ನಿರ್ಮಾಣಕ್ಕೆ ಯಾರೊಬ್ಬರೂ ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದ್ದು, ದೇಗುಲ ನಿರ್ಮಾಣವನ್ನು ನಾವು ವಿರೋಧಿಸುವುದಿಲ್ಲ ಎಂದು ಹಲವು ಮುಸ್ಲಿಂ ಸಂಘಟನೆಗಳು ಈಗ ಒಪ್ಪಿಕೊಂಡಿವೆ ಎಂದು ಸಾಕ್ಷಿ ಮಹಾರಾಜ್ ವಿವರಿಸಿದರು.